Saturday, October 03, 2026
Menu

ಅಕ್ರಮ ಪಿಜಿಗಳಿಗೆ ಜಿಬಿಎ ಶಾಕ್; ವಿದ್ಯುತ್,ನೀರು ಸ್ಥಗಿತ!

ಅಕ್ರಮ ಪಿಜಿಗಳಿಗೆ ಜಿಬಿಎ ಶಾಕ್; ವಿದ್ಯುತ್,ನೀರು ಬಂದ್‌!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ಅಣಬೆಗಳಂತೆ ತಲೆಎತ್ತಿರುವ ಅಕ್ರಮ ಪೇಯಿಂಗ್ ಗೆಸ್ಟ್ (ಪಿಜಿ) ವಸತಿನಿಲಯಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕಾನೂನುಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಪಿಜಿಗಳಿಗೆ ಶೀಘ್ರದಲ್ಲೇ ವಿದ್ಯುತ್ ಹಾಗೂ ನೀರು ಸರಬರಾಜು ಸಂಪರ್ಕ ಕಡಿತಗೊಳಿಸಿ, ಕಟ್ಟಡಗಳಿಗೆ ಬೀಗ ಜಡಿಯಲು ಯೋಜನೆ ರೂಪಿಸಲಾಗಿದೆ.
60 ಸಾವಿರಕ್ಕೂ ಹೆಚ್ಚು ಅಕ್ರಮ ಪಿಜಿಗಳು!
ಜಿಬಿಎ ನಡೆಸಿದ ಪ್ರಾಥಮಿಕ ಸಮೀಕ್ಷೆಯ ಪ್ರಕಾರ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸುಮಾರು 80,000ಕ್ಕೂ ಹೆಚ್ಚು ಪಿಜಿಗಳು ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ಅವುಗಳಲ್ಲಿ 60,000ಕ್ಕೂ ಅಧಿಕ ಪಿಜಿಗಳು ಸೂಕ್ತ ಪರವಾನಗಿ, ಕಟ್ಟಡ ನಕ್ಷೆ (Building Plan Approval) ಹಾಗೂ ಅಗ್ನಿ ಸುರಕ್ಷತಾ ಪ್ರಮಾಣಪತ್ರ (Fire Safety Certificate) ಪಡೆಯದೆ ಅಕ್ರಮವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ವಿಶೇಷವಾಗಿ ಬೆಂಗಳೂರು ಪೂರ್ವ ವಲಯದ ಐಟಿ ಕಾರಿಡಾರ್‌ಗಳಾದ ವೈಟ್‌ಫೀಲ್ಡ್, ಮಹದೇವಪುರ, ಕೆ.ಆರ್. ಪುರ, ಇಂದಿರಾನಗರ ಮತ್ತು ಸಿ.ವಿ. ರಾಮನ್ ನಗರ ಭಾಗದಲ್ಲಿ ಪರಿಶೀಲನೆ ನಡೆಸಿದಾಗ, ಸುಮಾರು 5,000 ಪಿಜಿಗಳ ಪೈಕಿ 2,500 ಪಿಜಿಗಳು ಸಂಪೂರ್ಣ ಕಾನೂನುಬಾಹಿರವಾಗಿ ಇರುವುದು ಕಂಡುಬಂದಿದ್ದು, ಈ ಮಾಹಿತಿಯನ್ನು ಜಿಬಿಎ ಉಚ್ಚ ನ್ಯಾಯಾಲಯಕ್ಕೂ ಸಲ್ಲಿಸಿದೆ.
ಬೆಸ್ಕಾಂ ಹಾಗೂ ಜಲಮಂಡಳಿ ಜಂಟಿ ಕಾರ್ಯಾಚರಣೆ
ನಿಯಮ ಉಲ್ಲಂಘಿಸಿರುವ ಪಿಜಿ ಮಾಲೀಕರಿಗೆ ಈಗಾಗಲೇ ಜಿಬಿಎ ಹಂತ-ಹಂತವಾಗಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. ಬೆಸ್ಕಾಂ (BESCOM) ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧಿಕಾರಿಗಳೊಂದಿಗೆ ಜಿಬಿಎ ಉನ್ನತಾಧಿಕಾರಿಗಳು ಸಭೆ ನಡೆಸಿದ್ದು, ನೋಟಿಸ್‌ ಅವಧಿ ಮುಗಿದ ತಕ್ಷಣ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತಗೊಳಿಸಲು ಕೋರಲಾಗಿದೆ.
ಪಿಜಿಯಲ್ಲಿರುವ ವಾಸಿಗಳಿಗೆ 15 ರಿಂದ 21 ದಿನ ಕಾಲಾವಕಾಶ
ಅಕ್ರಮ ಪಿಜಿಗಳನ್ನು ತಕ್ಷಣವೇ ಮುಚ್ಚುವುದರಿಂದ ಅಲ್ಲಿ ವಾಸಿಸುತ್ತಿರುವ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹೈಕೋರ್ಟ್ ನಿರ್ದೇಶನದಂತೆ 15 ರಿಂದ 21 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ನಿಗದಿತ ಸಮಯದೊಳಗೆ ಪಿಜಿ ಮಾಲೀಕರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸಂಪರ್ಕ ಕಡಿತಗೊಳಿಸಿ ಬೀಗ ಜಡಿಯಲಾಗುತ್ತದೆ.
#BengaluruPGs #GBAAction #BengaluruNews #IllegalPGs #BESCOM #BWSSB #KarnatakaNews #UdayakalaNews #BengaluruUpdates

Related Posts

Leave a Reply

Your email address will not be published. Required fields are marked *