ಮುಖ್ಯ ಚುನಾವಣಾ ಆಯುಕ್ತ ರಾಜೀನಾಮೆ ನೀಡದಿದ್ದರೆ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ; ಅಭಿಜೀತ್ ದೀಪ್ಕೆ ಎಚ್ಚರಿಕೆ!
ಮುಂಬೈ:ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಹುತ್ಯಾದಿಂದ ಕೆಳಗಿಳಿಯಬೇಕು. ಇಲ್ಲದಿದ್ದರೆ ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್ನಲ್ಲಿ ಸಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ರಾಷ್ಟ್ರಾದ್ಯಂತ ‘ಜಂತರ್ ಮಂತರ್ 2.0’ ಆಂದೋಲನ ಆರಂಭವಾಗಲಿದೆ ಎಂದು ತಿಳಿಸಿದರು.
ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ದೇಶದ ವಿವಿಧ ಭಾಗಗಳಿಂದ ಸಿಜೆಪಿ ಕಾರ್ಯಕರ್ತರು (ಕಾಕ್ರೋಚ್ಗಳು) ದೆಹಲಿಗೆ ತೆರಳಿ ಅಕ್ಟೋಬರ್ 10 ರಂದು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ದೆಹಲಿ ಪೊಲೀಸರು ತಡೆಯಲು ಯತ್ನಿಸಿದರೆ, ತಡೆದ ಸ್ಥಳವನ್ನೇ ನಮ್ಮ ಹೊಸ ‘ಜಂತರ್ ಮಂತರ್’ ಎಂದು ಪರಿಗಣಿಸಿ ಧರಣಿ ಮುಂದುವರಿಸುತ್ತೇವೆ. ನಮ್ಮ ಪ್ರತಿಭಟನೆಯು ಸಂಪೂರ್ಣವಾಗಿ ಶಾಂತಿಯುತವಾಗಿರಲಿದ್ದು, ಮಹಾತ್ಮ ಗಾಂಧಿಯವರು ತೋರಿಸಿದ ಅಹಿಂಸಾ ಮಾರ್ಗದಲ್ಲಿ ಸಾಗಲಿದೆ. ಪ್ರತಿಭಟಿಸುವ ನಮ್ಮ ಹಕ್ಕನ್ನು ಸರ್ಕಾರ ಮತ್ತು ದೆಹಲಿ ಪೊಲೀಸರು ಗೌರವಿಸುತ್ತಾರಾ ಅಥವಾ ಹಿಂದಿನಂತೆ ದೌರ್ಜನ್ಯ ಪುನರಾವರ್ತಿಸುತ್ತಾರಾ ಎಂಬುದನ್ನು ಅವರೇ ನಿರ್ಧರಿಸಬೇಕು.
ಪ್ರಜಾಪ್ರಭುತ್ವ ಉಳಿಸುವ ಹೋರಾಟ: ಇದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಬ್ಬ ಭಾರತೀಯ ನಾಗರಿಕನೂ ಕೈಗೊಳ್ಳಬೇಕಾದ ಅಸ್ತಿತ್ವದ ಹೋರಾಟವಾಗಿದೆ ಎಂದು ದೀಪ್ಕೆ ಅಭಿಪ್ರಾಯಪಟ್ಟಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಮತದಾರರ ಹೆಸರುಗಳ ನಿರ್ವಹಣೆಯಲ್ಲಿ ವ್ಯಾಪಕ ಅಕ್ರಮ ಹಾಗೂ ಅಡಚಣೆಗಳಾಗಿವೆ ಎಂದು ಆರೋಪಿಸಿ ಮುಂಬೈ ಮತ್ತು ದೆಹಲಿಯಲ್ಲಿ ತೀವ್ರ ಪ್ರತಿಭಟನೆಗಳು ನಡೆದಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಗಂಭೀರ ಕ್ರಿಮಿನಲ್ ತನಿಖೆ ನಡೆಸಬೇಕು, ಎಸ್ಐಆರ್ (SIR) ಪಟ್ಟಿಯನ್ನು ತಡೆಹಿಡಿದು 2025ರ ಜನವರಿಯ ಮತದಾರರ ಪಟ್ಟಿಯನ್ನೇ ಮರುಸ್ಥಾಪಿಸಬೇಕು ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ಕುರಿತ 2023ರ ಕಾನೂನನ್ನು ರದ್ದುಗೊಳಿಸಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಿಜೆಪಿ ಆಗ್ರಹಿಸಿದೆ.
#CJP #AbhijeetDipke #JantarMantar #ElectionCommission #GyaneshKumar #DelhiProtest #MumbaiNews #UdayakalaNews #Democracy


