ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಉಳಿದ ಇಬ್ಬರು ಚುನಾವಣಾ ಆಯುಕ್ತರ ಸಲಹೆಗಳನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಧ್ಯಮವರದಿಯ ಹಿನ್ನೆಲೆಯುಲ್ಲಿ ಅಮಾನತುಗೊಳಿಸಲು ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ಅರ್ಜಿದಾರ ರಾಕೇಶ್ ಕುಮಾರ್ ಸಿಂಗ್ ಪರವಾಗಿ ವಕೀಲ ವಿಕಾಸ್ ಸಿಂಗ್ ವಿಷಯ ಪ್ರಸ್ತಾಪಿಸಿ ತುರ್ತು ವಿಚಾರಣೆಗೆ ಕೋರಿದರು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂವರು ಅರ್ಜಿಯನ್ನು ಪಟ್ಟಿ ಮಾಡಲು ಒಪ್ಪಿಗೆ ಸೂಚಿಸಿದರೂ ವಿಚಾರಣೆಗೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ.
ಚುನಾವಣೆ ಆಯೋಗ ವ್ಯಾಪ್ತಿಗೆ ಒಳಪಡುವ ಯಾವುದೇ ನಿರ್ಧಾರಗಳನ್ನು ಸಿಇಸಿ ಏಕಪಕ್ಷೀಯವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಘೋಷಿಸಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಬಹು-ಸದಸ್ಯ ಆಯೋಗದ ಉದ್ದೇಶ ಇರುವುದೇ ಸರ್ವಾನುಮತ ಅಥವಾ ಬಹುಮತದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಪೂರ್ಣ ಆಯೋಗದ ಅನುಮೋದನೆ ಇದೆಯೇ ಎಂಬ ಬಗ್ಗೆ ಸಂಶಯಗಳಿವೆ ಎಂದು ವಕೀಲ ವಿಕಾಸ್ ಸಿಂಗ್ ವಾದಿಸಿದರು.
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದು, ಜ್ಞಾನೇಶ್ ಕುಮಾರ್ ಆಡಳಿತಾರೂಢ ಬಿಜೆಪಿಯ ಕೈಗೊಂಬೆ. ಅವರನ್ನು ಆಯುಕ್ತ ಸ್ಥಾನದಿಂದ ತಕ್ಷಣ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಐತಿಹಾಸಿಕ ಹೊಣೆಗಾರಿಕೆ ಮತ್ತೊಮ್ಮೆ ಕಾಂಗ್ರೆಸ್ ಹೆಗಲ ಮೇಲೆ ಬಂದಿದೆ. ನಮ್ಮ ಪೂರ್ವಜರು ತಮ್ಮ ತ್ಯಾಗ ಮತ್ತು ಬಲಿದಾನಗಳಿಂದ ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ್ದರು. ಆ ಪ್ರಜಾಪ್ರಭುತ್ವದ ಅಡಿಪಾಯವನ್ನು ಮೋದಿ ಸರ್ಕಾರ 12 ವರ್ಷಗಳಲ್ಲಿ ಸಂಚು ರೂಪಿಸಿ ದುರ್ಬಲಗೊಳಿಸಿದೆ ಎಂದಿದ್ದಾರೆ.
ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಮುಖ್ಯ ಚುನಾವಣಾ ಆಯುಕ್ತರು ಮೋದಿ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಆಶಯಗಳ ವಿರುದ್ಧವಾಗಿ ಕೆಲಸ ನಡೆಯುತ್ತಿದೆ. ನಮ್ಮ ಹೋರಾಟ ಯಾವುದೇ ಪಕ್ಷ, ಸಂಸ್ಥೆ ಅಥವಾ ವ್ಯಕ್ತಿಯ ವಿರುದ್ಧವಲ್ಲ. ಭಾರತದ ಮತದಾರರ ಹಕ್ಕುಗಳು, ಸಂವಿಧಾನ ಮತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವುದೇ ಹೋರಾಟದ ಉದ್ದೇಶ ಎಂದು ತಿಳಿಸಿದ್ದಾರೆ.


