ಮನೆ ಎಲ್ಲಾ ಕೊಳ್ಳೆ ಹೊಡೆದ ಮೇಲೆ ಬೀಗ ಸರಿಯಿದೆಯಾ ಎಂದು ನೋಡಿದಂತೆ, 13ಕೋಟಿ ಮತದಾರರನ್ನು ಡಿಲೀಟ್ ಮಾಡಿದ ನಂತರ ಎಸ್‌ಐಆರ್ ಸರಿಯಾಗಿದೆ ಎನ್ನುತ್ತಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಕಿಡಿಕಾರಿದರು.
ಮಡಿಕೇರಿಯ ಪಾಲೇಮಾಡುವಿನಲ್ಲಿ ಸುದ್ದಿಗಾರರೊಂದಿಗೆ ಎಸ್‌ಐಆರ್ ಸರಿಯಾಗಿದೆ ಎಂಬ ಸುಪ್ರೀಂ ಕೋರ್ಟ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ತಪ್ಪು ಮಾಡಿಲ್ವಾ? ಬಿಹಾರದಲ್ಲಿ ಆಧಾರ್ ಕಾರ್ಡ್ ಒಪ್ಪಿಕೊಳ್ಳಬೇಕು ಅಂತ ಹೇಳಿತ್ತು. ಆದರೆ ಬಂಗಾಳದಲ್ಲಿ ಆದಾಗ ಆಧಾರ್ ಕಾರ್ಡ್ ತೆಗೆದುಕೊಂಡಿಲ್ಲ. ಸುಪ್ರೀಂ ಕೋರ್ಟ್ ಆಗ ಏನು ಮಾಡಿತು ಎಂದು ಪ್ರಶ್ನಿಸಿದರು.
ಪಶ್ಚಿಮ ಬಂಗಾಳದಲ್ಲಿ ೩೮ ಲಕ್ಷ ಜನ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಅದು ಇತ್ಯರ್ಥವಾಗಲು ೧೫ ವರ್ಷ ಬೇಕಾಗಿದೆ. ಮನೆ ಎಲ್ಲಾ ಕೊಳ್ಳೆ ಹೊಡೆದಾಯಿತು. ೧೩ ಕೋಟಿ ಮತದಾರರ ಹೆಸರು ಡಿಲೀಟ್ ಆಯಿತು. ಈಗ ಮನೆಯ ಬೀಗ ಸರಿ ಇದೆಯಾ ಎಂದು ನೋಡುತ್ತಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ನಾಲ್ಕು ಲಕ್ಷ ಬಾಂಗ್ಲಾದೇಶದವರು ಇದ್ದಾರೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದರು. ಈಗ ಬಿಜೆಪಿಯವರು ಎಲ್ಲಿದ್ದಾರೆ, ಕೇಂದ್ರ ಬಿಜೆಪಿಯ ಕುತಂತ್ರ ಎಲ್ಲಾ ಗೊತ್ತಾಗಿದೆ. ರಂಗಾ-ಬಿಲ್ಲಾ ಹಾಗೂ ಉರಿಗೌಡ-ನಂಜೇಗೌಡ ಎಂದು ಮೋದಿ-ಶಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಎಸ್‌ಐಆರ್‌ಗೆ ವಾಸದ ದೃಢೀಕರಣ ಪತ್ರ ಮಾಡಿಕೊಡಬೇಕು ಎಂದಿದ್ದ ರಾಜ್ಯ ಸರ್ಕಾರವೂ ಅದರಲ್ಲಿ ವಿಫಲವಾಗಿದೆ. ಎಲ್ಲವೂ ಮಾತಿನಲ್ಲಿ ಆಗಲ್ಲ. ಬಿಜೆಪಿಯವರು ೬೦ ಸಾವಿರ ಮುಸ್ಲಿಂ ಮತದಾರರನ್ನು ತೆಗೆಯಲು ಹೊರಟಿದ್ದಾರೆ. ಈ ರೀತಿ ಚುನಾವಣೆಯಲ್ಲಿ ಗೆಲ್ಲಬೇಕಾ? ನಾಚಿಕೆಯಾಗಲ್ವಾ? ಇದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರಿಗೆಲ್ಲ ಅನ್ವಯಿಸುತ್ತದೆ ಎಂದು ಪ್ರಕಾಶ್ ರಾಜ್ ಹೇಳಿದರು.


