ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ತತ್ವ. ಸಹಕಾರ ಪದ್ದತಿಯಿಂದ ರೈತರ ಪ್ರಗತಿ ಸಾಧ್ಯವಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ನನಗೂ ಸಹಕಾರಿ ಚಳುವಳಿಗೂ ಅವಿನಾಭಾವ ಸಂಬಂಧ. ರಾಮಕೃಷ್ಣ ಹೆಗಡೆ ಅವರು 1983ರಲ್ಲಿ ಕನಕಪುರ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾದರು. ಆಗ ನನಗೆ 22 ವರ್ಷ. ಆಗ ನಾನೂ ಟಿಎಪಿಸಿಎಂಸ್ ಚುನಾವಣೆಗೆ ಸಾಮಾನ್ಯ ಕ್ಷೇತ್ರದಿಂದ ನಿಂತು ಗೆದ್ದಿದ್ದೆ. ಆದರೂ ನಾನು ಟಿಎಪಿಸಿಎಂಎಸ್ ಕಾರ್ಯಕ್ರಮಕ್ಕೆ ಹೋದವನಲ್ಲ. ಶಾಸಕರಾದ ಅರಗ ಜ್ಞಾನೇಂದ್ರ ಅವರ ಒತ್ತಾಯದ ಮೇರೆಗೆ ಇಲ್ಲಿದೆ ಬಂದೆ ಎಂದರು.
ಕಬ್ಬಿನ ಕಾರ್ಖಾನೆಗಳು ಸಹಕಾರಿ ಪದ್ದತಿಯಲ್ಲಿ ನಡೆದು ರೈತರನ್ನು ಕಾಪಾಡಿವೆ. ಮಲೆನಾಡು ಭಾಗದಲ್ಲಿ ಬಸ್, ಆಸ್ಪತ್ರೆ, ಬ್ಯಾಂಕ್ ಗಳು ಸಹಕಾರಿ ಪದ್ದತಿಯಲ್ಲಿ ನಡೆಯುತ್ತಿವೆ. ಇದು ಈ ಭಾಗದ ಹೆಗ್ಗಳಿಕೆ. ಟಿಎಪಿಸಿಎಂಎಸ್ 75 ವರ್ಷ ಆಚರಿಸುತ್ತಿದೆ. ಒಂದು ಸಂಸ್ಥೆ ಇಷ್ಟು ವರ್ಷಗಳ ಕಾಲ ಉಳಿಯುವುದು ಕಷ್ಟ. ಅದನ್ನು ತೀರ್ಥಹಳ್ಳಿ ಟಿಎಪಿಸಿಎಂಎಸ್ ಸುಳ್ಳಾಗಿಸಿದೆ. ಇಲ್ಲಿನ ಆಡಳಿತ ಮಂಡಳಿಗೆ ಅಭಿನಂದನೆಗಳು ಎಂದು ಹೇಳಿದರು.
ಮಲೆನಾಡು ಭಾಗಕ್ಕೆ ಹೊಸ ಪ್ರವಾಸೋದ್ಯಮ ನೀತಿ, ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು ಎಂದು ಘೋಷಣೆ ಮಾಡಲಾಗಿದೆ. ಹೀಗೆ ಅನೇಕ ಐಸಿಹಾಸಿಕ ನಿರ್ಣಯಗಳನ್ನು ಕರಾವಳಿ ಭಾಗದಲ್ಲಿ ಸಚಿವ ಸಂಪುಟ ನಡೆಸಿ ನಮ್ಮ ಸರ್ಕಾರ ತೆಗೆದುಕೊಂಡಿದೆ. ಮಲೆನಾಡು ಭಾಗವನ್ನು ಉಳಿಸುವ ಬಗ್ಗೆ ಜನರ ಅಭಿಪ್ರಾಯ ಪಡೆದು ತೀರ್ಮಾನ, ಚರ್ಚೆ ಮಾಡೋಣ ಎಂದರು.


