ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಖುದ್ದು ಹಾಜರಾಗುವುದಕ್ಕೆ ಆರೋಪಿ ದರ್ಶನ್ಗೆ ಹೈಕೋರ್ಟ್ ಅವಕಾಶ ನೀಡಿದೆ.
ಸಾಕ್ಷ್ಯ ವಿಚಾರಣೆ ವೇಳೆ ತನಗೆ ಖುದ್ದಾಗಿ ಹಾಜರಾಗಲು ಅವಕಾಶ ನೀಡುವಂತೆ ದರ್ಶನ್ ಸಲ್ಲಿಸಿದ್ದ ಮೇಲದ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಎತ್ತಿಕೊಂಡಿತ್ತು.. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠದ ಅರ್ಜಿಯ ವಿಚಾರಣೆ ನಡೆಸಿದೆ, ಸಾಕ್ಷ್ಯಗಳ ವಿಚಾರಣೆ ವೇಳೆ ಖುದ್ದು ಹಾಜರಾಗಲು ಆರೋಪಿ ದರ್ಶನ್ಗೆ ಅವಕಾಶ ನೀಡಿದೆ.
ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. ಏಳು ಸಾಕ್ಷಿಗಳ ವಿಚಾರಣೆ ನಡೆಯುವಾಗ ತಾನು ಖುದ್ದು ಹಾಜರಾಗುವುದು ಅಗತ್ಯ ಎಂದು ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿದರು. ಇದಕ್ಕೆ ಸೂಕ್ತ ಕಾರಣವನ್ನೂ ಮಂಡಿಸಿದರು.
ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ದರ್ಶನ್ ಖುದ್ದು ಹಾಜರಾಗಲು ಅವಕಾಶ ನೀಡಿದೆ. ಪ್ರತಿಯೊಂದು ವಿಚಾರಣೆಯ ದಿನವೂ ಆರೋಪಿಯು ತನ್ನ ಇಚ್ಛೆಯಂತೆ ಖುದ್ದು ಹಾಜರಾಗಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ದರ್ಶನ್ ಯಾವ ದಿನಗಳಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂಬುದಕ್ಕೆ ಸೂಕ್ತ ಸಮಯ ಮತ್ತು ದಿನಾಂಕ ನಿಗದಿಪಡಿಸುವಂತೆ ಮನವಿ ಮಾಡಿದರು. ವಿಚಾರಣೆಯ ದಿನಾಂಕ ಅಥವಾ ಸಾಕ್ಷಿಗಳ ವಿಚಾರಣೆಯ ಕ್ರಮವನ್ನು ಆರೋಪಿಗಳು ನಿರ್ಧರಿಸುವಂತಾಗಬಾರದು ಎಂದು ಹೈಕೋರ್ಟ್ ಹೇಳಿದೆ. ನ್ಯಾಯಾಲಯ ನಿಗದಿಪಡಿಸುವ ವೇಳಾಪಟ್ಟಿಯಂತೆ ವಿಚಾರಣೆ ನಡೆಯಬೇಕು ಎಂದು ಪೀಠ ತಿಳಿಸಿದೆ.


