Friday, September 18, 2026
Menu

ಕರಾವಳಿ–ಮಲೆನಾಡಿಗೆ ಹೊಸ ರೂಪ: ಸಿಎಂ ಡಿಕೆ ಶಿವಕುಮಾರ್

ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಹೊಸ ರೂಪ ನೀಡುವ ಮೂಲಕ ಇಲ್ಲಿನ ಮಾನವ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗಕ್ಕೆ 340 ಕಿ.ಮೀ. ಉದ್ದದ ಕರಾವಳಿ ತೀರವಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕು. ಕರಾವಳಿ ಹಾಗೂ ಮಲೆನಾಡಿನಲ್ಲಿ ವಲಸೆ ಹೋಗುವುದನ್ನು ತಡೆಯುವಂತಹ ಅವಕಾಶಗಳನ್ನು ಸೃಷ್ಟಿಸಬೇಕು ಎಂದರು.

ಕರ್ನಾಟಕದಲ್ಲೇ ಕರಾವಳಿ–ಮಲೆನಾಡು ಭಾಗದಲ್ಲಿ ಹೆಚ್ಚು ವಿದ್ಯಾವಂತರು, ಪ್ರಜ್ಞಾವಂತರು ಹಾಗೂ ಪ್ರತಿಭಾವಂತ ಮಾನವ ಸಂಪನ್ಮೂಲವಿದೆ. ಈ ಮಾನವ ಸಂಪತ್ತಿಗೆ ಸ್ಥಳೀಯವಾಗಿಯೇ ಅವಕಾಶ ಮತ್ತು ಶಕ್ತಿ ತುಂಬುವ ಅಗತ್ಯವಿದೆ. ಈ ನಾಡು ಯಾವುದಕ್ಕೂ ಕಡಿಮೆಯಿಲ್ಲ ಎಂದು ಹೇಳಿದರು.

ಕರಾವಳಿ ಭಾಗದ ಜನರು ಕಳೆದ 30–40 ವರ್ಷಗಳಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು, ಪಕ್ಷದವರು ಸೇರಿದಂತೆ ಬಿಜೆಪಿ ಶಾಸಕರು ಹಾಗೂ ಸಂಸದರೂ ತಮ್ಮ ಅಭಿಪ್ರಾಯ ಮತ್ತು ಬೇಡಿಕೆಗಳನ್ನು ತಿಳಿಸಿದ್ದಾರೆ. ನಾವು ಕೈಹಿಡಿಯದಿದ್ದರೆ ಇನ್ನಾರು ಕೈಹಿಡಿಯುತ್ತಾರೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರ ಹಲವು ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡಿದ್ದೇನೆ ಎಂದು ಹೇಳಿದರು.

ಈ ಎಲ್ಲ ವಿಚಾರಗಳ ಕುರಿತು ಶುಕ್ರವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ಕಾರ ಕೈಗೊಳ್ಳುವ ತೀರ್ಮಾನಗಳನ್ನು ಬಳಿಕ ತಿಳಿಸಲಾಗುವುದು ಎಂದರು.

ಕಸ್ತೂರಿರಂಗನ್ ವರದಿ ಜಾರಿ ವಿಚಾರದಲ್ಲಿ ರೈತರು ಹಾಗೂ ಮಲೆನಾಡು–ಕರಾವಳಿ ಭಾಗದ ಜನರಿಗೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಪ್ರತಿಕ್ರಿಯೆಸಿದ ಅವರು, ಸರ್ಕಾರ ಈಗಾಗಲೇ ವರದಿಯನ್ನು ತಿರಸ್ಕರಿಸುವ ನಿಲುವು ಹೊಂದಿದ್ದರೂ, ಈ ವಿಚಾರದಲ್ಲಿ ವಿವಿಧ ಒತ್ತಡಗಳು ಮತ್ತು ಅಭಿಪ್ರಾಯಗಳಿವೆ. ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನದಲ್ಲಿ ಎಲ್ಲ ಶಾಸಕರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗುವುದು. ಅಧಿವೇಶನಕ್ಕೂ ಮುನ್ನ ತಾವೇ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಗ್ರೌಂಡ್ ರಿಯಾಲಿಟಿ ಅರಿಯುತ್ತಿರುವುದಾಗಿ ಎಂದು ಹೇಳಿದರು.

ಅಸೆಂಬ್ಲಿಯಲ್ಲಿ ಚರ್ಚೆ ಮಾಡುವ ಮೊದಲು, ಯಾವುದೇ ಅಂತಿಮ ಅಭಿಪ್ರಾಯಕ್ಕೆ ಬರುವ ಮೊದಲು ವಾಸ್ತವಾಂಶ ತಿಳಿದುಕೊಳ್ಳಬೇಕು. ಸಾಮಾನ್ಯ ರೈತರು, ಸ್ಥಳೀಯ ಜನರು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ ಎಂದರು.

ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಮಾತ್ರವಲ್ಲದೆ, ರೈತರ ಸಮಸ್ಯೆಗಳು ಮತ್ತು ಬರ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಗುವುದು. ರೈತರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಗಳನ್ನು ಅರಿತುಕೊಂಡು ಚರ್ಚಿಸಲು ಅಧಿವೇಶನ ಕರೆದಿರುವುದಾಗಿ ತಿಳಿಸಿದರು. ಉಮರ್ ಖಾಲೀದ್ ವಿಚಾರವಾಗಿ ಬಿ.ಕೆ. ಹರಿಪ್ರಸಾದ್ ಅವರು ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,“ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಿ.ಕೆ. ಹರಿಪ್ರಸಾದ್  ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *