Thursday, September 03, 2026
Menu

ಶುದ್ಧೀಕರಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಪಿ ನಡ್ಡಾಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

ಹಲ್ದ್ವಾನಿಯ ರಾಮ ಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಾನು ಭಾಷಣ ಮಾಡಿದ ಬಳಿಕ ಆ ಜಾಗವನ್ನು ಶುದ್ಧೀಕರಣ ಮಾಡಿರುವ ಪ್ರಕ್ರಿಯೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಸ್ಪೀಕರ್‌ ಜೆಪಿ ನಡ್ಡಾ ಅವರನ್ನು ಆಗ್ರಹಿಸಿದ್ದಾರೆ.

ನಡ್ಡಾ ಅವರಿಗೆ ಖರ್ಗೆಯವರು ಪತ್ರ ಬರೆದಿದ್ದು, ಕ್ರಮ ಕೈಗೊಳ್ಳುವಂತೆ ಉತ್ತರಾಖಂಡ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು. ಘಟನೆಗೆ ಕಾರಣರೆಂದು ಆರೋಪಿಸಲಾದ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ 24 ದಿನಗಳು ಕಳೆದರೂ ಎಫ್‌ಐಆರ್ ದಾಖಲಾಗಿಲ್ಲ. ಈ ವಿಷಯವು ನನ್ನ ವೈಯಕ್ತಿಕ ವಿಚಾರ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಹುದ್ದೆಯನ್ನು ಮೀರಿದ್ದಾಗಿದೆ. ಪ್ರತಿದಿನವೂ ಈ ಕ್ರೌರ್ಯ ಎದುರಿಸುತ್ತಿರುವ ಕೋಟ್ಯಂತರ ಜನರ ಭಾವನೆಗಳೊಂದಿಗೆ ಬೆಸೆದುಕೊಂಡಿದೆ. ಇಂತಹ ತಪ್ಪು ಮಾಡುವವರಿಗೆ ತಕ್ಕ ಪಾಠ ಕಲಿಸುವುದು ಅಗತ್ಯ ಎಂದು ಖರ್ಗೆ ಪತ್ರದಲ್ಲಿ ವಿವರಿಸಿದ್ದಾರೆ.

ರಾಮ್ ಲೀಲಾ ಮೈದಾನದಲ್ಲಿ ನಡೆದಿದೆ ಎನ್ನಲಾದ ‘ಶುದ್ಧೀಕರಣ’ದಲ್ಲಿ ಭಾಗಿಯಾದವರ ವಿರುದ್ಧ ಎಫ್‌ಐಆರ್ ದಾಖಲಿಸುವುದನ್ನು ಖಚಿತಪಡಿಸುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನಿರ್ದೇಶನ ನೀಡಬೇಕೆಂದು ನಡ್ಡಾ ಅವರನ್ನು ಒತ್ತಾಯಿಸಿದರು. 2027ರ ಉತ್ತರಾಖಂಡ ವಿಧಾನಸಭಾ ಚುನಾವಣೆ ಹಿನ್ನೆಲೆ ಆಗಸ್ಟ್ 8ರಂದು ಹಲ್ದ್ವಾನಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಳಿಕ ಈ ವಿವಾದ ಭುಗಿಲೆದ್ದಿದೆ.

Related Posts

Leave a Reply

Your email address will not be published. Required fields are marked *