ಸಾರ್ವಜನಿಕರು ಇರುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿದೆ ಎಂಬುದು ಸಾಬೀತು ಆಗದಿದ್ದರೆ ಅದು ಎಸ್ಸಿಎಸ್ಟಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ ಮೆಹ್ತಾ ಅವರನ್ನು ಒಳಗೊಂಡಿರುವ ಪೀಠವು ಈ ಆದೇಶ ನೀಡಿದೆ, ಉತ್ತರ ಪ್ರದೇಶದ ಶಾಲೆಯೊಂದರ ಮ್ಯಾನೇಜರ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿ ಕಾಯ್ದೆಯ ಸೆಕ್ಷನ್ 3(2)(r) ಮತ್ತು 3(1)(s) ಅಡಿ ನಡೆಯುತ್ತಿದ್ದ ಕಾನೂನು ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
ಕಾಯ್ದೆಯ ಪ್ರಕಾರ ಸಾರ್ವಜನಿಕರ ವೀಕ್ಷಣೆಯ ವ್ಯಾಪ್ತಿಯಲ್ಲಿರುವ ಸ್ಥಳ ಎಂದರೆ ಆರೋಪಿಯು ಸಂತ್ರಸ್ತನಿಗೆ ಆಡಿದ ಮಾತುಗಳನ್ನು ಸಾರ್ವಜನಿಕರು ನೋಡಲು ಅಥವಾ ಕೇಳಲು ಸಾಧ್ಯವಾಗುವ ಸ್ಥಳವಾಗಿರಬೇಕು. ಘಟನೆಯು ಸಾರ್ವಜನಿಕರು ಇಲ್ಲದ ನಾಲ್ಕು ಗೋಡೆಗಳ ಮಧ್ಯೆ ನಡೆದರೆ ಅದನ್ನು ಸಾರ್ವಜನಿಕ ವೀಕ್ಷಣೆಯ ಸ್ಥಳದಲ್ಲಿ ನಡೆದಿದೆ ಎಂದು ಹೇಳಲಾಗದು ಎಂದು ಪೀಠ ಸ್ಪಷ್ಟಪಡಿಸಿದೆ.
ಎಫ್‌ಐಆರ್‌ನಲ್ಲಿ ಶಾಲಾ ಮ್ಯಾನೇಜರ್ ನಿರ್ದಿಷ್ಟವಾಗಿ ಯಾವುದೇ ಜಾತಿ ನಿಂದನೆಯ ಮಾತುಗಳನ್ನು ಆಡಿದ್ದಾರೆ ಎಂದು ಉಲ್ಲೇಖಿಸಿಲ್ಲ. ಪ್ರಾಸಿಕ್ಯೂಷನ್ ಒದಗಿಸಿರುವ ದಾಖಲೆಗಳು ಉಭಯ ಬಣಗಳ ನಡುವಿನ ಜಗಳ ತೋರಿಸುತ್ತವೆಯೇ ಹೊರತು ಮ್ಯಾನೇಜರ್ ಯಾವುದೇ ನಿರ್ದಿಷ್ಟ ಜಾತಿ ನಿಂದನೆಯ ಮಾತು ಆಡಿರುವುದನ್ನು ದೃಢಪಡಿಸುವುದಿಲ್ಲ ಎಂದು ತಿಳಿಸಿದೆ. ಮ್ಯಾನೇಜರ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾಗಿದ್ದ ಪ್ರಕ್ರಿಯೆ ರದ್ದುಗೊಳಿಸುತ್ತೇವೆ. ಪ್ರಕರಣದಲ್ಲಿ ದಾಖಲಾಗಿರುವ ಇತರ ಆರೋಪಗಳಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ ಎಂದು ಹೇಳಿದೆ.


