ರಾಜ್ಯದ ಮತದಾರರ ಪಟ್ಟಿಯಲ್ಲಿ ಹನ್ನೊಂದು ವಿದೇಶಿ ಪ್ರಜೆಗಳ ಹೆಸರು ಸೇರ್ಪಡೆಗೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ, ಕರ್ನಾಟಕದ ಮತದಾರರ ಗುರುತಿನ ಚೀಟಿ ಹೊಂದಿರುವ 11 ವಿದೇಶಿ ಪ್ರಜೆಗಳ ವಿವರಗಳನ್ನು ವಿದೇಶಿಗರ ನೋಂದಣಿ ಕಚೇರಿಯು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಕೇಳಿದೆ. ಈ 11 ಮಂದಿಯನ್ನು ತಮಿಳುನಾಡಿನಲ್ಲಿ ಪತ್ತೆಹಚ್ಚಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಇವೆ ಎಂದು ಮೂಲಗಳು ತಿಳಿಸಿವೆ.
ಈ ವಿದೇಶಿಗರು ಶ್ರೀಲಂಕಾದವರು ಎನ್ನಲಾಗಿದ್ದು, ಪೂರ್ಣ ವಿವರ ಇನ್ನಷ್ಟೇ ಲಭಿಸಬೇಕಿದೆ. ಇವರ ದಾಖಲೆಗಳು, ಪಾಸ್‌ಪೋರ್ಟ್ ಹಾಗೂ ಪೌರತ್ವದ ಬಗ್ಗೆ ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ಹಾಗೂ ದೃಢೀಕರಣ ನಡೆಸುತ್ತಿದ್ದಾರೆ. ಈ ವಿದೇಶಿ ಪ್ರಜೆಗಳ ಹೆಸರಿನಲ್ಲಿ ಇರುವ ಮತದಾರರ ಗುರುತಿನ ಚೀಟಿಗಳು ನಿಜವಾದುದೇ ಅಥವಾ ನಕಲಿಯೇ ಎಂಬ ಪರಿಶಿಲನೆ ಜೊತೆಗೆ ಅವುಗಳನ್ನು ಹಿಂದೆ ಮತದಾನಕ್ಕೆ ಬಳಸಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮತದಾರರ ಮಾಹಿತಿಯಲ್ಲಿ ಮ್ಯಾಪಿಂಗ್ ಆಗದ ದಾಖಲೆಗಳು ಕಂಡುಬಂದಿರುವ ಇತರ ಪ್ರಕರಣಗಳನ್ನೂ ಪರಿಶೀಲಿಸಲಾಗುತ್ತಿದೆ.
ಗೋವಾ, ಅಂಡಮಾನ್ ಮತ್ತು ಒಡಿಶಾ ಸೇರಿದಂತೆ ಇತರ ರಾಜ್ಯಗಳ ಅಧಿಕಾರಿಗಳೂ ಕರ್ನಾಟಕದ ಚುನಾವಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ, ತಮ್ಮ ರಾಜ್ಯಗಳ ಮತದಾರರು ಎಸ್‌ಐಆರ್ ಅರ್ಜಿಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಿರುವ ಪ್ರಕರಣಗಳ ಕುರಿತು ವಿವರ ಹಾಗೂ ಪರಿಶೀಲನೆ ಕೋರಿದ್ದಾರೆ. ಕೆಲವು ಮತದಾರರ ದಾಖಲೆಗಳ ಪರಿಶೀಲನೆ ವೇಳೆ ಪಾಸ್‌ಪೋರ್ಟ್‌ಗಳನ್ನೂ ಅಧಿಕಾರಿಗಳು ಕೇಳುತ್ತಿದ್ದಾರೆ. ಪಾಸ್‌ಪೋರ್ಟ್ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ, ಅಗತ್ಯವಿದ್ದಲ್ಲಿ ಕೇಂದ್ರದ ಸಂಬಂಧಿತ ಸಚಿವಾಲಯಗಳ ಮೂಲಕವೂ ನೈಜತೆ ಪರಿಶೀಲಿಸಲಾಗುತ್ತಿದೆ. ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಮತದಾರರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಇಂತಹ ಅನುಮಾನಾಸ್ಪದ ದಾಖಲೆಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯಲಿದೆ.
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಡಿ ಮ್ಯಾಪಿಂಗ್ ಆಗದ ಮತ್ತು ದೋಷಪೂರಿತ ಮಾಹಿತಿ ಹೊಂದಿರುವ 43.80 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ಪಡೆದವರು ನಿಗದಿತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗದಿದ್ದರೆ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಯಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಿದೆ.
ಆ.24ರಿಂದ ಅ.22ರ ವರೆಗೆ ಕರಡು ಮತದಾರರ ಪಟ್ಟಿ ಸಂಬಂಧ ಕ್ಲೇಮು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆ.24ರಿಂದ ಅ.22 ರ ವರೆಗೆ ಈ 43.80 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಸಂಬಂಧಿತ ಮತದಾರರ ನೋಂದಣಾಧಿಕಾರಿ(ಇಆರ್‌ಒ) ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ(ಎಇಆರ್‌ಒ) ಈ ನೋಟಿಸ್ ಜನರೇಟ್ ಮಾಡಲಿದ್ದಾರೆ. ಈ ನೋಟಿಸ್‌ಗಳನ್ನು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತದಾರರಿಗೆ ಖುದ್ದು ನೀಡಲಿದ್ದಾರೆ. ಈ ವೇಳೆ ಮತದಾರ ನೋಟಿಸ್ ಸ್ವೀಕರಿಸುವ ಫೋಟೊ ತೆಗೆದು ಬಿಎಲ್‌ಒ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲಿದ್ದಾರೆ.


