ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಕರಡಕಲ್ ಗ್ರಾಮದ ತಿಪ್ಪಣ್ಣ ಬಜಲರ ಅವರ ಪತ್ನಿ ರಾಣೆಮ್ಮ (35) ಎಂಬವರು ಶವವಾಗಿ ಪತ್ತೆಯಾಗಿದ್ದು, ಈ ಸಾವು ಅನುಮಾನಗಗಳಿಗೆ ಕಾರಣವಾಗಿದೆ. ಅತ್ಯಾಚಾರ ನಡೆಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಜಾಲಿಬೆಂಚಿ ಗ್ರಾಮದ ಮಾರ್ಗ ಮಧ್ಯದ ಹೊಲವೊಂದರಲ್ಲಿ ಈ ಕೃತ್ಯ ನಡೆದಿದೆ.
ರಾಣೆಮ್ಮ ಅವರು ಬುಧವಾರ ಸಂಜೆ ಕಟ್ಟಿಗೆ ತರಲು ಜಾಲಿಬೆಂಚಿ ಗ್ರಾಮದ ಕಡೆ ತೆರಳಿದ್ದರು ಎನ್ನಲಾಗಿದ್ದು, ದಾರಿ ಮಧ್ಯೆ ಹೊಲದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಮಾತು ಪರಿಸರದಲ್ಲಿ ಕೇಳಿ ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ನಿಖರ ಕಾರಣ ಹಾಗೂ ಮಹಿಳೆಯ ಸಾವಿನ ಹಿಂದಿರುವ ಅಂಶಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳ ಗುರುತು ಹಾಗೂ ಘಟನೆ ನಡೆದ ಸಂದರ್ಭದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ತನಿಖೆಯ ನಂತರವಷ್ಟೇ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಧಾರವಾಡದಲ್ಲಿ ಕತ್ತು ಸೀಳಿ ವ್ಯಕ್ತಿಯ ಕೊಲೆ
ಧಾರವಾಡ ನಗರದಲ್ಲಿ ಭೀಕರ ಕೊಲೆ ನಡೆದಿದ್ದು, ವ್ಯಕ್ತಿಯೊಬ್ಬರ ಕತ್ತು ಸೀಳಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಧಾರವಾಡ ಲಕ್ಷ್ಮಿ ಸಿಂಗನಕೇರಿ ನಿವಾಸಿ ಹನುಮಂತ ಅಣ್ಣಿಗೇರಿ (25) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಧಾರವಾಡದ ಟೋಲ್ ನಾಕಾ ಬಳಿಯ ಐನಾಕ್ಸ್ ಸಮೀಪ ಈ ಘಟನೆ ನಡೆದಿದೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


