ಭಾರತದಲ್ಲಿಯೇ ತರಬೇತಿ ಪಡೆದ ಏಕೈಕ ಸಿಂಫೋನಿ ಆರ್ಕೆಸ್ಟ್ರಾ ಇದು. ಮುಂದಿನ ದಿನಗಳಲ್ಲಿ ಸದ್ಗುರುಗಳ ನೇತೃತ್ವದ ಸಾಯಿ ಸಿಂಫೋನಿ ಆರ್ಕೆಸ್ಟ್ರಾದೊಂದಿಗೆ ನಾನೂ ಸಹಯೋಗವಹಿಸುತ್ತೇನೆ. ಹೊಸದೇನಾದರೂ ಮಾಡುತ್ತೇನೆ ಎಂದು ಖ್ಯಾತ ಸಂಗೀತ ಕಲಾವಿದ ಹಾಗೂ ಹಲವು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದಿರುವ ರಿಕಿ ಕೇಜ್ ಭರವಸೆ ನೀಡಿದರು.
ನಾನು ವಿಶ್ವದ ಹಲವು ಸಿಂಪೋನಿ ಆರ್ಕೆಸ್ಟ್ರಾಗಳೊಂದಿಗೆ ಕೆಲಸ ಮಾಡುತ್ತೇನೆ. ಆಗೆಲ್ಲಾ ನನಗೆ ಸದಾ ಭಾರತದ ನೆನಪು ಬರುತ್ತದೆ. ಸಿಂಫೋನಿ ಆರ್ಕೆಸ್ಟ್ರಾದಲ್ಲಿ ಹಲವು ಶೈಲಿಯ, ಹಲವು ವಿಧದ ವಾದ್ಯಗಳಿವೆ. ಅದರಲ್ಲಿರುವ ಪ್ರತಿ ವಾದ್ಯವು ವಿಶಿಷ್ಟ ಮತ್ತು ತನ್ನದೇ ಆದ ಅಸ್ತಿತ್ವ ಹೊಂದಿರುತ್ತದೆ. ಅದು ಎಂದಿಗೂ ಮತ್ತೊಂದನ್ನು ಮೀರಲು ಅಥವಾ ಮತ್ತೊಂದರಂತೆ ಆಗಲು ಪ್ರಯತ್ನಿಸುವುದಿಲ್ಲ ಎಂದು ವಿವರಿಸಿದರು.
ಆದರೆ ಈ ಎಲ್ಲ ವಾದ್ಯಗಳು ಒಗ್ಗೂಡಿ ಒಂದು ಹದದಲ್ಲಿ ಮೇಳೈಸಿದಾಗ ಅದ್ಭುತವಾಗಿ ಸಂಗೀತ ಹೊರಹೊಮ್ಮುತ್ತದೆ. ಅದೇ ರೀತಿ ಭಾರತದಲ್ಲಿಯೂ ಹಲವು ಧರ್ಮ, ಭಾಷೆ, ಆಹಾರ ಪದ್ಧತಿಯಿದೆ. ಇದ್ಯಾವುದೂ ಮತ್ತೊಂದರಂತೆ ಅಲ್ಲ. ಆದರೆ ಎಲ್ಲವೂ ಸೇರಿ ಭಾರತೀಯ ಸಂಸ್ಕೃತಿಗೆ ಮೆರುಗು ತಂದಿದೆ ಎಂದು ವಿಶ್ಲೇಷಿಸಿದರು. ನೂರು ಕೋಟಿಗೂ ಹೆಚ್ಚು ಜನರಿರುವ ಭಾರತದಲ್ಲಿ ಒಂದೇ ಒಂದು ಸಿಂಫೋನಿ ಆರ್ಕೆಸ್ಟ್ರಾ ಇದೆ. ಅದು ಸಾಯಿ ಸಿಂಫೋನಿ ಆರ್ಕೆಸ್ಟ್ರಾ. ನಮ್ಮ ಜನರು ಇದರ ಮಹತ್ವ ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಧೂಮಪಾನ ಅಥವಾ ಮದ್ಯಪಾನದಿಂದಷ್ಟೇ ಕ್ಯಾನ್ಸರ್ ಬರುವುದು ಎನ್ನುವುದು ತಪ್ಪು. ಕ್ಯಾನ್ಸರ್ ಬರಲು ಹಲವು ಕಾರಣಗಳಿವೆ. ನಮ್ಮ ಸುತ್ತಮುತ್ತಲಿನ ಕಲುಷಿತ ಪರಿಸರದಿಂದಲೂ ಕ್ಯಾನ್ಸರ್ ಸಮಸ್ಯೆ ವ್ಯಾಪಕವಾಗುತ್ತಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
“ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಜೀವನಪದ್ಧತಿ ಮತ್ತು ರೀತಿನೀತಿಗಳನ್ನು ಬದಲಾಯಿಸುವುದರ ಮೂಲಕ ಕ್ಯಾನ್ಸರ್‌ನಂಥ ರೋಗಗಳನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ರಸಗೊಬ್ಬರ ಆಧರಿತ ಕೃಷಿಯಿಂದ ಸಾವಯವ ಕೃಷಿಗೆ ಹೊರಳಿಕೊಳ್ಳುವುದು ಮಹತ್ವದ ಕೊಡುಗೆ ನೀಡಬಲ್ಲದು ಎಂದು ಸಲಹೆ ಮಾಡಿದರು.


