ಗಣೇಶ ಚತುರ್ಥಿ ಹಬ್ಬದ ವೇಳೆ ಸಾರ್ವಜನಿಕರು ಪರಿಸರ ಸ್ನೇಹಿ ಆಚರಣೆಗೆ ಒತ್ತು ನೀಡಬೇಕು ಎಂದು ಜಿಬಿಎ ಹೇಳಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ತಯಾರಿ ಮತ್ತು ಮಾರಾಟ ನಿಷೇಧಿಸಿದೆ.
ಜಿಬಿಎ, ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಇಲಾಖೆಯು ಪಿಒಪಿಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಿದೆ. ಪಿಒಪಿ, ಭಾರ ಲೋಹ ಒಳಗೊಂಡ ರಾಸಾಯನಿಕ ಬಣ್ಣ, ಜೈವಿಕವಾಗಿ ಕರಗದ ವಸ್ತುಗಳಿಂದ ತಯಾರಿಸಿದ ಮೂರ್ತಿ ಉತ್ಪಾದನೆ, ಮಾರಾಟ ಮತ್ತು ಜಲಮೂಲಗಳ್ಲಿ ಅವುಗಳ ವಿಸರ್ಜನೆ ನಿರ್ಬಂಧಿಸಲಾಗಿದೆ.
ರಾಸಾಯನಿಕ ಬಣ್ಣಗಳು ಜಲಮೂಲಗಳನ್ನು ಕಲುಷಿತಗೊಳಿಸುತ್ತವೆ ಎಂದು ಪರಿಸರ ಇಲಾಖೆ ಆತಂಕ ವ್ಯಕ್ತಪಡಿಸಿದ್ದು, ಪರಿಸರಸ್ನೇಹಿ ಜೇಡಿಮಣ್ಣಿನ ಗಣಪತಿ ಮೂರ್ತಿಗಳನ್ನು ಬಳಸಲು ಸೂಚಿಸಿದೆ.
ವಿಷಕಾರಿ ರಾಸಾಯನಿಕಯುಕ್ತ ಮೂರ್ತಿಗಳನ್ನು ನಗರದ ಕೆರೆ, ಬಾವಿ ಸೇರಿದಂತೆ ಪ್ರಮುಖ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ಜಲಮಾಲಿನ್ಯ ಉಂಟಾಗುತ್ತಿದೆ. ಹಬ್ಬದ ದಿನಗಳಲ್ಲಿ ಮುನ್ನೆಚ್ಚರಿಕೆ ವಹಿಸದೆ ರಾಸಾಯನಿಕ ಬಣ್ಣದ ಮೂರ್ತಿಗಳನ್ನು ನೀರಿಗೆ ಬಿಡುವುದರಿಂದ ನೀರು ಮತ್ತು ಭೂಮಿ ಕಲುಷಿತಗೊಳ್ಳುತ್ತಿವೆ. ಪರಿಸರ ವ್ಯವಸ್ಥೆ ಹಾಗೂ ಜಲಚರಗಳಿಗೆ ಭಾರಿ ಹಾನಿ ಉಂಟುಮಾಡುತ್ತಿದೆ ಎಂದು ಪರಿಸರ ಇಲಾಖೆ ಅಧಿಕಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ನೈಸರ್ಗಿಕ ಜೇಡಿಮಣ್ಣು ಮತ್ತು ನೈಸರ್ಗಿಕ ಬಣ್ಣಗಳಿಂದ ಮಾಡಿದ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಬಳಸಬೇಕು ಎಂದು ಜಿಬಿಎ ಅಧಿಕಾರಿಗಳು ಸೂಚಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.


