ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ನಡೆಸಿದ ವಿಶೇಷ ತಪಾಸಣೆ ವೇಳೆ ಹಲವು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಪತ್ತೆಯಾಗಿದ್ದು, ಬೆಂಗಳೂರಿನ ಹಲವು ತ್ರಿ-ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
30 ಆಹಾರ ತಪಾಸಣೆ ತಜ್ಞರ ತಂಡವು 26 ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಿ ಪರೀಕ್ಷೆಗಾಗಿ 35 ಆಹಾರ ಮಾದರಿಗಳನ್ನು ಸಂಗ್ರಹಿಸಿವೆ. ತಪಾಸಣೆಯ ವೇಳೆ ಅವಧಿ ಮೀರಿದ ಹಾಲು, ಮಾಂಸ, ಮೀನು, ಕೊಳೆತ ಹಾಗೂ ಶಿಲೀಂಧ್ರ ಬೆಳೆದ ತರಕಾರಿಗಳು ಮತ್ತು ಅಡುಗೆ ಕೋಣೆಗಳಲ್ಲಿ ತೀವ್ರ ಅನೈರ್ಮಲ್ಯ ಪತ್ತೆಯಾಗಿದೆ.
ದಿ ಲಲಿತ್ ಅಶೋಕ್: 76 ಕೆಜಿ ಮಾಂಸ, 200 ಕೆಜಿ ತರಕಾರಿ ಹಾಗೂ 32 ಲೀಟರ್ ಅವಧಿ ಮೀರಿದ ಹಾಲು ಜಪ್ತಿ ಮತ್ತು ನಾಶ. ತಾಜ್ ಯಶವಂತಪುರ: 72 ಕೆಜಿ ಮಾಂಸ ಮತ್ತು ಮೀನು ಜಪ್ತಿ. ರೇಡಿಸನ್ ಬ್ಲೂ ದಿ ಅಟ್ರಿಯಾ: 105 ಕೆಜಿಗೂ ಅಧಿಕ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆ. ಶಾಂಗ್ರಿಲಾ ಹಾಗೂ ಫೋರ್ ಸೀಸನ್ಸ್ ಹೋಟೆಲ್‌ಗಳಲ್ಲೂ ಕಳಪೆ ಮಾಂಸ ಪತ್ತೆಯಾಗಿದೆ.
ಆಹಾರ ಪದಾರ್ಥಗಳ ಮೇಲೆ ಸರಿಯಾದ ಲೇಬಲ್ ಇಲ್ಲದಿರುವುದು, ಅವಧಿ ಮೀರಿದ ಆಹಾರ ಉತ್ಪನ್ನಗಳ ಸಂಗ್ರಹ, ಅನೈರ್ಮಲ್ಯಕರ ರೀತಿ ಆಹಾರ ಸಂಗ್ರಹ ಮತ್ತು ನಿರ್ವಹಣೆ, ತರಕಾರಿಗಳಲ್ಲಿ ಶಿಲೀಂಧ್ರ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಪದಾರ್ಥ ಸಮರ್ಪಕವಾಗಿ ಪ್ರತ್ಯೇಕಿಸದಿರುವುದು ಸೇರಿದಂತೆ ಹಲವು ಲೋಪಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿರುವ ಲೇಬಲಿಂಗ್ ನಿಯಮಗಳನ್ನು ಪಾಲಿಸದಿರುವುದು, ಆಹಾರ ಉತ್ಪನ್ನಗಳ ಮೇಲೆ ತಪ್ಪಾದ ಲೇಬಲ್ ಅಂಟಿಸಿರುವುದು ಮತ್ತು ತಪ್ಪು ಹೆಸರಿನಲ್ಲಿ ಉತ್ಪನ್ನ ಮಾರಾಟ ಮಾಡುತ್ತಿರುವುದು, ಅವಧಿ ಮೀರಿದ ಆಹಾರ ಪದಾರ್ಥ ಸಂಗ್ರಹಿಸಿರುವುದು ಕೂಡ ಕಂಡು ಬಂದಿದೆ.
ಹಲವು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡು ಬಂದ ಕಾರಣ ಆಹಾರ ಉದ್ಯಮ ನಿರ್ವಾಹಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ನಿಬಂಧನೆಗಳ ಅಡಿಲ್ಲಿ ತೀರ್ಪು ನೀಡುವ ಅಧಿಕಾರಿಯ ಮುಂದೆ ಮುಂದಿನ ಕಾನೂನು ಕ್ರಮದ ವಿಚಾರಣೆ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.


