Wednesday, August 05, 2026
Menu

ಕೆಆರ್‌ಎಸ್ ನೀರಿನ ಮಟ್ಟ 105 ಅಡಿಗೆ ಏರಿಕೆ: ನಾಲೆಗಳಿಗೆ ಹರಿಸಲು ರೈತರ ಆಗ್ರಹ

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೆಆರ್‌ಎಸ್ ನೀರಿನ ಮಟ್ಟ 105 ಅಡಿಗೆ ಏರಿಕೆಯಾಗಿದೆ. ಮುಂಗಾರು ಬೆಳೆಗೆ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕೆಂದು ಮಂಡ್ಯ ಜಿಲ್ಲೆಯ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೆಆರ್‌ಎಸ್ ನೀರಿನ ಮಟ್ಟ 81 ಅಡಿಗೆ ಕುಸಿದಿದ್ದಾಗ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ರೈತರಿಗೆ ಯಾವುದೇ ಹೊಸ ಬೆಳೆ ಬಿತ್ತನೆ ಮಾಡಬೇಡಿ, ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾಗಿದೆ ಎಂದು ಸೂಚನೆ ನೀಡಿತ್ತು. ಈಗ ಜಲಾನಯನ ಪ್ರದೇಶ ಹಾಗೂ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.

ನೀರಿನ ಮಟ್ಟ 105 ಅಡಿಗೆ ಏರಿಕೆಯಾಗುತ್ತಿದ್ದಂತೆ ಮಂಡ್ಯದ ರೈತರು ಕೃಷಿ ಚಟುವಟಿಕೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಮುಂಗಾರು ಹಂಗಾಮಿನ ಬೆಳೆಗೆ ಕೂಡಲೇ ನಾಲೆಗಳಿಗೆ ನೀರು ಹರಿಸುವುದಾಗಿ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ರೈತರು ಒತ್ತಾಯಿಉತ್ತಿದ್ದಾರೆ. ಬಿತ್ತನೆಗೆ ಇದು ಸೂಕ್ತ ಸಮಯ, ತಡ ಮಾಡಿದರೆ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಭರಚುಕ್ಕಿ ಫಾಲ್ಸ್‌ ಮೈದುಂಬಿಕೊಂಡಿದೆ. ಕಬಿನಿ ಜಲಾಶಯ ಭರ್ತಿಯಾಗಿ 27 ಸಾವಿರ ಕ್ಯೂಸೆಕ್‌ ನೀರು ಹೊರಬಿಡಲಾಗಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ. ಮಲೆನಾಡಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಬರುತ್ತಿದೆ. ಈ ನೀರಿನ ಹರಿವು ರೈತರಿಗೆ ಹೊಸ ಭರವಸೆ ನೀಡಿದೆ.

105 ಟಿಎಂಸಿ ಸಾಮರ್ಥ್ಯ ತುಂಗಭದ್ರಾ ಜಲಾಶಯದಲ್ಲಿ 51.145 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 91 ಸಾವಿರಕ್ಕೂ ಅಧಿಕ ಕ್ಯೂಸೆಕ್ ಒಳಹರಿವಿನ ಪ್ರಮಾಣವಿದ್ದು, ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದೆ. 44 ಟಿಎಂಸಿ ಇದ್ದ ನೀರಿನ ಸಂಗ್ರಹ 51 ಟಿಎಂಸಿಗೆ ಏರಿಕೆಯಾಗಿದೆ.

Related Posts

Leave a Reply

Your email address will not be published. Required fields are marked *