ಕೊಡಗಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಬೊಮ್ಮಂಜಿ ಕೇರಿಯಲ್ಲಿ ಕಾಡಾನೆಯೊಂದು ಮೃತಪಟ್ಟಿದೆ. ಕಳೆದ ಎರಡು ದಿನಗಳಿಂದ ಕೈಕಾಡು ಗ್ರಾಮ ವ್ಯಾಪ್ತಿಯ ಗದ್ದೆ, ತೋಟಗಳಲ್ಲಿ ಅಲೆದಾಡುತ್ತಿದ್ದ ಗಂಡು ಕಾಡಾನೆಯೊಂದು ಭಾನುವಾರ ಸಂಜೆ ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿಯಲ್ಲಿ ಕಾಣಿಸಿಕೊಂಡಿದೆ. ಸೋಮವಾರ ಬೆಳಿಗ್ಗೆಯೂ ಗ್ರಾಮದಲ್ಲಿ ಕಾಣಿಸಿಕೊಂಡ ಕಾಡಾನೆ ಮಧ್ಯಾಹ್ನ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೊಮ್ಮಂಜಿಕೇರಿಯ ಬೆಳೆಗಾರರ ತೋಟಗಳಿಗೆ ತೆರಳುವ ಮಣ್ಣು ರಸ್ತೆಯಲ್ಲಿ ಕಾಡಾನೆ ಮಲಗಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ಕಾಡಾನೆಯು ಗ್ರಾಮದ ಅಚ್ಛಾಂಡಿರ ಕುಟುಂಬಸ್ಥರ ಅಡಿಕೆ ತೋಟದಲ್ಲಿ ಅಸ್ವಸ್ಥಗೊಂಡು ಮೃತಪಟ್ಟಿದೆ.
ಅನಾರೋಗ್ಯದಿಂದ ಕಾಡಾನೆ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಯ ಆರ್ಎಫ್ಒ ಬಿ.ಎಂ.ಶಂಕರ್ ನೇತೃತ್ವದಲ್ಲಿ ಫಿರೋಜ್ ಖಾನ್, ಫಾರೆಸ್ಟರ್ ಕಾಳೆಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆನೆಯ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದು ಬರಲಿದೆ.
ಕಾಡಾನೆ ದಾಳಿಗೆ ಅರಣ್ಯ ವೀಕ್ಷಕ ಸಾವು
ಮಲೆ ಮಹದೇಶ್ವರ ವನ್ಯಜೀವಿಧಾಮದ ಪೊನ್ನಾಚಿ ಅರಣ್ಯ ವಲಯದ ಹುಣಸೆಬಯಲು ಅರಣ್ಯ ಪ್ರದೇಶದಲ್ಲಿ ಶನಿವಾರ ರಾತ್ರಿ ಕಾಡಾನೆ ದಾಳಿಗೆ ಅರಣ್ಯ ವೀಕ್ಷಕ ಮೃತಪಟ್ಟಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ನಿವಾಸಿ ಮಹಾದೇವಸ್ವಾಮಿ (48) ಮೃತಪಟ್ಟವರು.
ಮಹದೇಶ್ವರ ವನ್ಯಜೀವಿಧಾಮದಲ್ಲಿ ಅರಣ್ಯ ವೀಕ್ಷಕರಾಗಿ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಮಹಾದೇವಸ್ವಾಮಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಹುಣಸೆಬಯಲು ಅರಣ್ಯ ಪ್ರದೇಶದ ಕಳ್ಳ ಬೇಟೆ ತಡೆ ಶಿಬಿರದಲ್ಲಿದ್ದ ವೇಳೆ ಶಬ್ದ ಕೇಳಿ ಹೊರಬಂದಾಗ ಕಾಡಾನೆ ಎದುರಾಗಿ ದಾಳಿ ಮಾಡಿದೆ.
ಮಹಾದೇವಸ್ವಾಮಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನರಾಗಿದ್ದು, ಸಿಬ್ಬಂದಿ ಅವರನ್ನು ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.


