Menu

ಚಿಕ್ಕಬಳ್ಳಾಪುರದಲ್ಲಿ ಕಂಟೇನರ್‌ಗೆ ಬಸ್‌ ಡಿಕ್ಕಿ: ಟೆಕ್ಕಿ ಯುವತಿ ಬಲಿ

ಚಿಕ್ಕಬಳ್ಳಾಪುರದ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44ರ ಅಗಲಗುರ್ಕಿ ಸಮೀಪ ಖಾಸಗಿ ಬಸ್ ಕಂಟೇನರ್‌ಗೆ ಡಿಕ್ಕಿ ಹೊಡೆದಿದ್ದು, ಟೆಕ್ಕಿ ಯುವತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಬಸ್‌ ಹೈದರಾಬಾದ್‌ನಿಂದ ಬೆಂಗಳೂರಿನತ್ತ ಸಂಚರಿಸುತ್ತಿತ್ತು, ಮುಂಭಾಗದಲ್ಲಿ ಸಂಚರಿಸುತ್ತಿದ್ದ ಕಂಟೇನರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್‌ ಮುಂಭಾಗ ಚಾಲಕನ ಪಕ್ಕದ ಬಾಗಿಲಿನ ಬಳಿ ಅನಂತಪುರ ಜಿಲ್ಲೆಯ ಚಿಲ್ಲಮತ್ತೂರಿನ ಯುವತಿ 28 ವರ್ಷದ ಕೌಸರ್ ತಾಜ್ ಕುಳಿತಿದ್ದರು. ಡಿಕ್ಕಿಯ ತೀವ್ರತೆಗೆ ಆಕೆಯ ದೇಹ ಬಸ್‌ನ ಕಬ್ಬಿಣದ ಅವಶೇಷಗಳ ನಡುವೆ ಸಿಲುಕಿಕೊಂಡಿದೆ. , ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕ್ರೇನ್ ಮೂಲಕ ಬಸ್‌ನ ಮುಂಭಾಗ ತೆರವುಗೊಳಿಸಿ ಮೃತದೇಹ ಹೊರತೆಗೆದರು.

ಯುವತಿ ಕೊಡಿಕೊಂಡ ಚೆಕ್‌ಪೋಸ್ಟ್ ಬಳಿ ಬಸ್ ಹತ್ತಿದ್ದು, ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಸ್ಸಿನಲ್ಲಿ 40 ಮಂದಿ ಪ್ರಯಾಣಿಕರಿದ್ದರು, ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಅಪಘಾತದ ಬಳಿಕ ಕೆಲಕಾಲ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರವನ್ನು ಸುಗಮಗೊಳಿಸಿದರು.

ಮೊಬೈಲ್‌ ಕೊಡಿಸಿಲ್ಲವೆಂದು ಹಾಸನದಲ್ಲಿ ಬಾಲಕ ಆತ್ಮಹತ್ಯೆ

ಮನೆಯಲ್ಲಿ ಮೊಬೈಲ್‌ ಕೊಡಿಸಿಲ್ಲವೆಂಬ ಬೇಸರಕ್ಕೆ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಹೊರವಲಯದ ಯಡಿಯೂರು ಗ್ರಾಮದಲ್ಲಿ ನಡೆದಿದೆ.
ಪ್ರೀತಂ (13) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆತ ಚಿತ್ರದುರ್ಗದ ಶ್ರೀನಿವಾಸ್-ಗೌರಮ್ಮ ದಂಪತಿ ಪುತ್ರ. ಕುಟುಂಬ ಸಮೇತ ಯಡಿಯೂರಿನಲ್ಲಿ ನಿರ್ಮಾಣವಾಗುತ್ತಿದ್ದ ಖಾಸಗಿ ಲೇಔಟ್‌ನಲ್ಲಿ ಕೆಲಸ ಮಾಡಲು ಬಂದಿದ್ದರು.

ಪ್ರೀತಂ ಚಿತ್ರದುರ್ಗದಲ್ಲಿ ಏಳನೇ ತರಗತಿ ಓದುತ್ತಿದ್ದು, ಶನಿವಾರ ಯಡಿಯೂರಿಗೆ ಬಂದಿದ್ದ. ದಂಪತಿ ಲೇಔಟ್‌ನಲ್ಲೇ ಶೆಡ್‌ನೊಳಗೆ ವಾಸವಿದ್ದರು. ಪ್ರೀತಂ ಮೊಬೈಲ್ ಕೊಡಿಸುವಂತೆ ಪೋಷಕರನ್ನು ಒತ್ತಾಯಿಸುತ್ತಿದ್ದ. ತಂದೆ ಮೊಬೈಲ್ ಕೊಡಿಸಲು ನಿರಾಕರಿಸಿದ್ದರು. ಬಳಿಕ ಬಾಲಕ ಶೆಡ್‌ನೊಳಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೇಗುಲದ ಲಿಫ್ಟ್‌ನಲ್ಲಿ ಸಿಲುಕಿ ವ್ಯಕ್ತಿ ಸಾವು
ಶಿವಮೊಗ್ಗ ನಗರದ ದತ್ತಾತ್ರೇಯ ಸ್ವಾಮಿ ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ನಿವೃತ್ತ ಇಂಜಿನಿಯರ್ ಅಸು ನೀಗಿದ್ದಾರೆ. ಕುಮಾರಸ್ವಾಮಿ (80) ಮೃತಪಟ್ಟವರು. ಭಾನುವಾರ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಈ ದುರಂತ ನಡೆದಿತ್ತು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Related Posts

Leave a Reply

Your email address will not be published. Required fields are marked *