Menu

ಸಂಸತ್‌ಗೆ ವಿದ್ಯಾರ್ಥಿ ಹಿತಾಸಕ್ತಿಯೇ ಪ್ರಧಾನ

ಸರ್ಕಾರವಿರಲಿ, ವಿರೋಧ ಪಕ್ಷವಿರಲಿ, ನೀಟ್ ವಿಚಾರದಲ್ಲಿ ಮೊಂಡುಪಟ್ಟು ಹಿಡಿಯುವುದರಲ್ಲಿ ಅರ್ಥವಿಲ್ಲ. ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ಬದುಕು ಮತ್ತು ಭವಿಷ್ಯದ ಪ್ರಶ್ನೆಯೂ ಇದಾಗಿದ್ದು ಇವೆಲ್ಲದರ ವ್ಯಾಪಕ ಚರ್ಚೆ ಇಂದು ದೇಶದ ಸಂಸತ್‌ನಲ್ಲಿ ನಡೆಯಬೇಕಿದೆ.

ಇಲ್ಲಿ ಯಾವ ರಾಜಕೀಯ ಪಾರ್ಟಿಯ ಪ್ರತಿಷ್ಠೆಯೂ ಮುಖ್ಯವಲ್ಲ. ಹತಾಶಗೊಂಡ ದೇಶದ ವಿದ್ಯಾರ್ಥಿ ಸಮೂಹದ ಮುಂದೆ ಇಂದು ಎದುರಾದ ದೊಡ್ಡ ಸವಾಲನ್ನು ಬಗೆಹರಿಸಲು ಪ್ರಜಾತಂತ್ರ ಮತ್ತು ಈ ಸಂಸದೀಯ ವ್ಯವಸ್ಥೆ ಹೇಗೆ ನೆರವಾಗಲಿದೆ ಎಂಬುದಷ್ಟೆ ಮುಖ್ಯ.

ಸಂಸದೀಯ ವ್ಯವಸ್ಥೆಯಲ್ಲಿ ಸಡಿಲಿಕೆ ಸೂತ್ರಗಳನ್ನು ಪಾಲಿಸುವುದು ಅನಿವಾರ್ಯ. ದೇಶದ ರಾಜಧಾನಿ ಮೊನ್ನೆ ನಡೆದ ಜಂತರ್ ಮಂತರ್ ಘಟನೆಗಳಿಗೆ ಕಾರಣಗಳಾದರೂ ಏನು ? ಇದಕ್ಕೆ ಸರ್ಕಾರ ಸದನದಲ್ಲಿ ಸಮಜಾಯಿಷಿ ನೀಡುವುದು ಸರಿಯಾದ ಮಾರ್ಗ. ಈ ದಿಶೆಯಲ್ಲಿ ಪ್ರತಿಪಕ್ಷಗಳು ಮಾಡಿರುವ ಒತ್ತಾಯದಲ್ಲಿ ತಪ್ಪೇನೂ ಇಲ್ಲ. ಇಂತಹ ವಿಷಯಗಳಿಗೆ ಪೂರ್ವಭಾವಿ ಅಥವಾ ವಿಸ್ತೃತ ಸಂಸತ್ ಚರ್ಚೆ ಬೇಕಿಲ್ಲ. ಸಂಸದೀಯ ಕಲಾಪಗಳನ್ನು ಸರಿದೂಗಿಸಲು ಅಧಿಕಾರರೂಢ ಪಾರ್ಟಿ, ದೇಶದ ಪರಿಸ್ಥಿತಿ ಮತ್ತು ಸನ್ನಿವೇಶಗಳಿಗೆ ಮಣಿಯುವುದು ಸೂಕ್ತ. ಇದರಿಂದ ಸರ್ಕಾರದ ಪ್ರತಿಷ್ಠೆ ಮತ್ತು ಘನತೆಗೆ ಧಕ್ಕೆಯೇನೂ ಆಗುವುದಿಲ್ಲ.

ದೇಶದ ಗೃಹ ಮಂತ್ರಿ ಅಮಿತ್‌ಶಾ ಜಂತರ್ ಮಂತರ್ ಘಟನೆಗೆ ಸಂಬಂಧಿಸಿದಂತೆ ಸಂಕ್ಷಿಪ್ತ ಹೇಳಿಕೆಯನ್ನು ನೀಡಿ ವಿವಾದಕ್ಕೆ ತೆರೆ ಎಳೆಯಬಹುದಿತ್ತು. ಇದರಿಂದ ಸಂಸತ್ತಿನ ಮುಂದಿನ ಕಲಾಪಗಳೂ ಸುಗಮವಾಗುತ್ತಿತ್ತು. ಆದರೆ ಈ ವಿಷಯದಲ್ಲಿ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಸಾಮರಸ್ಯ , ತಾಳಮೇಳವಿಲ್ಲದಿರುವುದು ದುರದೃಷ್ಟಕರ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಈಗ ಮುಗಿದ ಅಧ್ಯಾಯ. ಇದರ ಕುರಿತು ಈಗ ಸದನದಲ್ಲಿ ಹೆಚ್ಚು ಚರ್ಚೆ ಅನಗತ್ಯ. ಈಗ ಆಗಬೇಕಿರುವುದು ನೀಟ್ ಪರೀಕ್ಷೆಯ ಹಿಂದೆ ತುಂಬಿ ತುಳುಕಿರುವ ಅಕ್ರಮ ಮತ್ತು ಕೊಳಕನ್ನು ಸಂಪೂರ್ಣ ತೊಡೆದು ಹಾಕುವ ಬಗ್ಗೆ ತಾರ್ಕಿಕ ಚರ್ಚೆ ಆಗಬೇಕಿದೆ. ಇದರಲ್ಲಿ ಯಾರದ್ದೇ ಹಿತಾಸಕ್ತಿ ಇದ್ದರೂ ಅಂತವರನ್ನು ಸರ್ಕಾರ ಪತ್ತೆ ಹಚ್ಚಬೇಕಾಗುತ್ತೆ. ಈ ವಿಚಾರದಲ್ಲಿ ಮುಕ್ತ ಹಾಗೂ ಪಾರದರ್ಶಕ ಚರ್ಚೆಗೆ ಸರ್ಕಾರವಾಗಲೀ, ವಿಪಕ್ಷವಾಗಲೀ ಹಿಂಜರಿಯುವ ಪ್ರಮೇಯವೇನಿದೆ?

ಕೇಂದ್ರ ಸರ್ಕಾರವಾದರೂ ಈಗ ನೀಟ್ ಪರೀಕ್ಷಾ ಸುಧಾರಣೆಗೆ ಸಂಬಂಧಿಸಿದಂತೆ ನಂದನ್ ನಿಲೇಖಣಿ ಸಾರಥ್ಯದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಸುಧಾರಣೆಗೆ ಸಂಬಂಧಿಸಿದಂತೆ ಮಾತ್ರ ನಡೆಸುವ ಅಧ್ಯಯನವಷ್ಟೆ . ಆದರೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲಾಗದೆ ಹತಾಶಗೊಂಡ ಅಮಾಯಕ ವಿದ್ಯಾರ್ಥಿಗಳ ಅಕಾಲಿಕ ಸಾವು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ಮೇಲೆ ಕ್ರಿಮಿನಲ್ ಆರೋಪ ಹೊರೆಸಿ ಶಿಕ್ಷೆಗೆ ಗುರಿಪಡಿಸುವ ಬಗ್ಗೆ ಬೇಕಿರುವ ಶಾಸನ ಕುರಿತು ಸಂಸತ್‌ನಲ್ಲಿ ಚರ್ಚೆ ಆಗಬೇಕಿದೆ. ಸಂಸತ್‌ನಲ್ಲಿ ಈಗ ವಿಧೇಯಕ ಮಂಡನೆಯಾದ ಬಳಿಕ ಇದರ ಸಾಧಕ, ಭಾದಕಗಳ ಬಗ್ಗೆ ವ್ಯಾಪಕ ಚರ್ಚೆ ಆಗುವುದು ಅತ್ಯಗತ್ಯ .

ಸರ್ಕಾರವಿರಲಿ. ವಿರೋಧ ಪಕ್ಷವಿರಲಿ. ನೀಟ್ ವಿಚಾರದಲ್ಲಿ ಮೊಂಡುಪಟ್ಟು ಹಿಡಿಯುವುದರಲ್ಲಿ ಅರ್ಥವಿಲ್ಲ. ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ಬದುಕು ಮತ್ತು ಭವಿಷ್ಯದ ಪ್ರಶ್ನೆಯೂ ಇದಾಗಿದ್ದು ಇವೆಲ್ಲದರ ವ್ಯಾಪಕ ಚರ್ಚೆ ಇಂದು ದೇಶದ ಸಂಸತ್‌ನಲ್ಲಿ ನಡೆಯಬೇಕಿದೆ. ಇಲ್ಲಿ ಯಾವ ರಾಜಕೀಯ ಪಾರ್ಟಿಯ ಪ್ರತಿಷ್ಠೆಯೂ ಮುಖ್ಯವಲ್ಲ. ಹತಾಶಗೊಂಡ ದೇಶದ ವಿದ್ಯಾರ್ಥಿ ಸಮೂಹದ ಮುಂದೆ ಎದುರಾದ ದೊಡ್ಡ ಸವಾಲನ್ನು ಬಗೆಹರಿಸಲು ಪ್ರಜಾತಂತ್ರ ಮತ್ತು ಈ ಸಂಸದೀಯ ವ್ಯವಸ್ಥೆ ಹೇಗೆ ನೆರವಾಗಲಿದೆ ಎಂಬದಷ್ಟೆ ಮುಖ್ಯ.

Related Posts

Leave a Reply

Your email address will not be published. Required fields are marked *