Menu

ದೇಶದಲ್ಲಿ 93 ಸಾವಿರ ಶಾಲೆ ಮುಚ್ಚುತ್ತಿವೆ, ವಿಶ್ವಗುರು ಎಂದರೇನು: ಪ್ರಧಾನಿ ಮೋದಿ, ಕೇಂದ್ರದ ವಿರುದ್ಧ ಬಿಜೆಪಿ ನಾಯಕಿ ಪೌಡ್ವಾಲ್ ಕಿಡಿ

ಕೆಲವು ವರ್ಷಗಳ ಹಿಂದೆ ಭಾರತ ವಿಶ್ವಗುರು ಆಗಲಿದೆ ಎಂಬ ಬಲವಾದ ನಂಬಿಕೆ ನನಗಿತ್ತು. ದೇಶದಲ್ಲಿ 93 ಸಾವಿರ ಶಾಲೆಗಳನ್ನು ಮುಚ್ಚಲಾಗುತ್ತಿದೆ. ವಿಶ್ವಗುರು ಪರಿಕಲ್ಪನೆಗೆ ವಿರುದ್ಧ ಸಂಗತಿಗಳೇ ಹೆಚ್ಚಾಗಿ ನಡೆಯುತ್ತಿವೆ. ಹಾಗಾದರೆ ವಿಶ್ವಗುರುವಾಗುವ ಅಡಿಪಾಯವೇನು, ನಾವು ವಿಶ್ವಗುರು ಹೇಗೆ ಆಗುತ್ತೇವೆ, ಹಾಗಾಗಿ ವಿಶ್ವಗುರು, ವಿಶ್ವಗುರು ಎಂದು ಹೇಳುವುದನ್ನು ನಿಲ್ಲಿಸಬೇಕು ಅಥವಾ ಎಲ್ಲ ಅರ್ಥವಿಲ್ಲದ ಕೆಲಸಗಳನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕಿ, ಪದ್ಮಶ್ರೀ ಪುರಸ್ಕೃತ ಗಾಯಕಿ ಅನುರಾಧಾ ಪೌಡ್ವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಇತ್ತೀಚೆಗೆ ಶುಭಾಂಕರ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅನುರಾಧಾ ಪೌಡ್ವಾಲ್, ನಾವು ವಿದ್ಯಾವಂತರಾಗಬೇಕೆಂದು ಹೇಳಲಾಗುತ್ತಿತ್ತು. ಆದರೆ ದೇಶದಲ್ಲೇ 93 ಸಾವಿರ ಶಾಲೆಗಳು ಮುಚ್ಚಿವೆ. ಕನಸುಗಳ ಮೇಲೆ ನಡೆದು ಮುಂದೆ ಸಾಗಲು ಸಾಧ್ಯವಿಲ್ಲ. ಅದಕ್ಕಾಗಿ ಕಾರ್ಯರೂಪಕ್ಕೆ ತರುವ ಕೆಲಸಗಳಿರಬೇಕು ಎಂದು ಕುಟುಕಿದ್ದಾರೆ.

ರಾಮರಾಜ್ಯದ ಬಗ್ಗೆ ಮಾತನಾಡುತ್ತಾರೆ. ರಾಮಮಂದಿರದಲ್ಲಿಯೇ ಕಳ್ಳತನ ನಡೆದಿದೆ. ವಿಶ್ವಗುರು ಪರಿಕಲ್ಪನೆಗೆ ಬೇಕಾದ ಮಾನದಂಡಗಳೇನು, ಅವುಗಳ ಪಟ್ಟಿಯನ್ನು ಕೊಡಿ, ನಾವು ಅವನ್ನು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ.

ಅನುರಾಧಾ ಪೌಡ್ವಾಲ್ ಭಾರತದ ಜನಪ್ರಿಯ ಹಿನ್ನೆಲೆ ಗಾಯಕಿ.ಬಾಲಿವುಡ್ ಚಿತ್ರಗಳಿಗೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಹಲವು ಭಾರತೀಯ ಭಾಷೆಗಳಲ್ಲಿ ಭಕ್ತಿಗೀತೆಗಳು ಹಾಗೂ ಭಜನೆಗಳನ್ನು ಹಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ, ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು, 017ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಅವರ ಪತಿ ಅರುಣ್ ಪೌಡ್ವಾಲ್ ಸಂಗೀತ ನಿರ್ದೇಶಕರಾಗಿದ್ದರು. ಮಗಳು ಕವಿತಾ ಪೌಡ್ವಾಲ್ ಖ್ಯಾತ ಗಾಯಕಿ. ಮಗ ಆದಿತ್ಯ ಪೌಡ್ವಾಲ್ ಸಂಗೀತ ಸಂಯೋಜಕರಾಗಿದ್ದರು.

Related Posts

Leave a Reply

Your email address will not be published. Required fields are marked *