ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ದಾಸಗಾರೆಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ವಾಸವಿರುವ ಪಾಕಿಸ್ತಾನದ ಮಹಿಳೆ ಫರ್ಹಾನಾಜ್ ಮತ್ತು ಮಗ ಮೊಹಮ್ಮದ್ ಫರ್ದೀನ್ ಖಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.
ದಾಸಗಾರೆಪಲ್ಲಿಯ ನಿವಾಸಿ ಅಯೂಬ್ ಖಾನ್ ಪಾಕಿಸ್ತಾನದ ಫರ್ಹಾನಾಜ್ ಅವರನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಫರ್ಹಾನಾಜ್ ಹಾಗೂ ಮಗ ಫರ್ದೀನ್ ಖಾನ್ ಪಾಕಿಸ್ತಾನದ ಪೌರತ್ವ ಹೊಂದಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಗಳಿಬ್ಬರೂ ಭಾರತೀಯ ಪೌರತ್ವ ಹೊಂದಿರದಿದ್ದರೂ ಅಕ್ರಮವಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಫರ್ಹಾನಾಜ್ ಅವರ ಪತಿ ಅಯೂಬ್ ಖಾನ್ ಕತಾರ್ನಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಫರ್ಹಾನಾಜ್ ಮತ್ತು ಇಬ್ಬರು ಮಕ್ಕಳು ದಾಸಗಾರೆಪಲ್ಲಿ ಗ್ರಾಮದಲ್ಲೇ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಫರ್ಹಾನಾಜ್ ಮತ್ತು ಮಕ್ಕಳ ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ಪಾಕಿಸ್ತಾನಕ್ಕೆ ಮರಳಿರಲಿಲ್ಲ. ಆಪರೇಷನ್ ಸಿಂಧೂರ್ ನಂತರ ವೀಸಾ ನವೀಕರಣವೂ ಆಗಿರಲಿಲ್ಲ ಎನ್ನಲಾಗಿದೆ.


