Menu

SIR ಹಾಗೂ ರಾಜಕೀಯ ಸಾಮರಸ್ಯ

ಜನಪರ ದೃಷ್ಟಿಯಲ್ಲಿ ಪಾರದರ್ಶಕ ಎಸ್ ಎ ಆರ್ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಳ್ಳಬೇಕಾದರೆ ಎಲ್ಲ ರಾಜಕೀಯ ಪಕ್ಷಗಳ ನಾಯಕರ ನಡುವೆ ಸೌಹಾರ್ದತೆ ಮತ್ತು ಸಾಮರಸ್ಯವೂ ಅತಿ ಮುಖ್ಯ.

ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಕಡೆ ಈಗ ಎಸ್ ಐ ಅರ್ ಪಕ್ರಿಯೆ ಆರಂಭವಾಗಿದೆ. ಮತದಾರರ ವಿವರ ಮತ್ತು ಅಸಲೀ ಮತದಾರರ ಪಟ್ಟಿಯನ್ನು ಸಮರ್ಪಕ ಮತ್ತು ಕಾನೂನಾತ್ಮಕ ರೀತಿ ಸಿದ್ದಪಡಿಸುವುದೇ ಎಸ್ ಐ ಆರ್ ಮೂಲ ಗುರಿ. ಜಿಲ್ಲೆ ಮತ್ತು ತಾಲೂಕು ಆಡಳಿತವಲ್ಲದೆ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಮುಖ ಅಧಿಕಾರಿಗಳ ಸಮಕ್ಷಮದಲ್ಲಿ ಎಸ್ ಐ ಆರ್ ಪ್ರಕ್ರಿಯೆ ಮುಂದುವರಿದಿದೆ.

ರಾಜ್ಯದ ಮುಖ್ಯ ಚುನಾವಣೆ ಆಧಿಕಾರಿ ಅನ್ಬುಕುಮಾರ್ ಸಾರಥ್ಯದಲ್ಲಿ ಈ ಪ್ರಕ್ರಿಯೆ ಮುಂದುವರಿದಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಚುನಾವಣಾಧಿಕಾರಿ ಕಾರ್ಯಾಲಯದಿಂದ ಜಾರಿಯಾಗಿರುವ ಎಲ್ಲ ಮಾರ್ಗಸೂಚಿ ಮತ್ತು ನಿಯಮಾವಳಿಗಳನ್ನು ಬಿ ಎಲ್‌ಓಗಳು ಪಾಲಿಸುವುದು ಕಡ್ಡಾಯ. ಅಲ್ಲದೆ ಪ್ರತಿಯೊಂದು ಊರಿನ ವಾರ್ಡ್ ಅಥವಾ ಬ್ಲಾಕ್‌ನಲ್ಲಿ ವಾಸವಾಗಿರುವ ಮತದಾರರ ವಿವರಗಳನ್ನು ಸಮರ್ಪಕವಾಗಿ ಪಡೆಯಬೇಕೆಂಬುದು ಮಾರ್ಗಸೂಚಿ. ಆದರೆ ಕೆಲವು ಕಡೆ ಮಾರ್ಗಸೂಚಿಗೆ ವಿರುದ್ದವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತಿದೆ. ಇದಕ್ಕೆ ಆಡಳಿತಾರೂಢ ಪಕ್ಷವೇ ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಪ್ರಬಲ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ ರಾಜ್ಯದ ಕೆಲವೊಂದು ಪಟ್ಟಣ ಮತ್ತು ನಗರಗಳಲ್ಲಿ ಮನಸೋ, ಇಚ್ಚೆ ಈ ಪ್ರಕ್ರಿಯೆ ಮುಂದುವರಿದಿದೆ ಎಂಬ ಗುಮಾನಿಯನ್ನು ಬಿಜೆಪಿ ಮತ್ತು ಜೆಡಿಎಸ್ ಪ್ರಮುಖ ನಾಯಕರು ವ್ಯಕ್ತಪಡಿಸಿದ್ದಾರೆ. ಈ ಆರೋಪಗಳಲ್ಲಿ ಹುರುಳಿಲ್ಲ ಎನ್ನಲಾಗದು.

ಒಂದೇ ಸಮುದಾಯಕ್ಕೆ ಸೇರಿದ ಮತದಾರರನ್ನು ಒಂದು ಕಡೆ ಗುಂಪಾಗಿ ಕೂಡಿಸಿ ಮತಪಟ್ಟಿ ಪರಿಷ್ಕರಿಸಲು ಕಾನೂನಿನಡಿ ಅವಕಾಶ ಇದೆಯೇ ? ಈ ಹಿಂದೆ ಪ. ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿಯೂ ಇದೇ ಮಾದರಿಯಲ್ಲಿ ಕೆಲವೊಂದು ದೋಷಗಳು ಕಂಡು ಬಂದಿತ್ತು. ಆದರೆ ಕಾರ್ಯ ನಿರ್ವಹಣೆಯ ದೃಷ್ಟಿಯಿಂದ ಈ ರೀತಿಯಾಗಿ ಒಂದು ಕಡೆ ಗುಂಪು ಸೇರಿ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಕೋರಿದ ಮಾತ್ರಕ್ಕೆ ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯೇ ಎಂಬುದು ಗಂಭೀರ ಪ್ರಶ್ನೆ.

ಎಸ್ ಐ ಆರ್ ವಿಚಾರದಲ್ಲಿ ನಾಡಿನ ಜನತೆಗೆ ಚುನಾವಣಾಧಿಕಾರಿಗಳು ಮತ್ತು ಸರ್ಕಾರದಿಂದ ವ್ಯಾಪಕ ಪ್ರಚಾರ ಮತ್ತು ತಿಳಿವಳಿಕೆ ಅಗತ್ಯ. ಸರ್ಕಾರದ ಜೊತೆ ಕೆಲವೊಂದು ಸ್ಥಳೀಯ ಸಂಘಟನೆ ಮತ್ತು ಎನ್‌ಜಿಒಗಳೂ ಮಾಹಿತಿ ಕಲೆ ಹಾಕಲು ಮುಂದಾಗಬೇಕಿದೆ. ಮಿಗಿಲಾಗಿ ಇಂದು ಪಟ್ಟಣ ಮತ್ತು ಮಹಾನಗರಗಳಲ್ಲಿ ಅಧಿಕಾರಿಗಳು ಯಾವಾಗ ಮತ್ತು ಯಾವ ವೇಳೆಯಲ್ಲಿ ಮನೆಮನೆಗೆ ಭೇಟಿ ನೀಡುವರೆಂಬ ನಿಖರ ಮಾಹಿತಿ ಇಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಎಸ್ ಐ ಆರ್ ಸರಿಯಾದ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಚುನಾವಣಾಧಿಕಾರಿಗಳು ಮತ್ತು ಬಿಎಲ್‌ಓ , ಕೆಲವೊಂದು ಪರ್ಯಾಯ ಮತ್ತು ಕಾನೂನಾತ್ಮಕ ಮಾರ್ಗೋಪಾಯ ಆಲೋಚಿಸುವುದು ಸೂಕ್ತ. ಜನಪರ ದೃಷ್ಟಿಯಲ್ಲಿ ಪಾರದರ್ಶಕ ಎಸ್ ಎ ಆರ್ ಪ್ರಕ್ರಿಯೆ ಸುಗಮವಾಗಿ ಪೂಣಗೊಳ್ಳಬೇಕಾದರೆ ಎಲ್ಲ ರಾಜಕೀಯ ಪಕ್ಷಗಳ ನಾಯಕರ ನಡುವೆ ಸೌಹಾರ್ದತೆ ಮತ್ತು ಸಾಮರಸ್ಯವೂ ಅತಿ ಮುಖ್ಯ.

Related Posts

Leave a Reply

Your email address will not be published. Required fields are marked *