SIR ವಿಚಾರದಲ್ಲಿ ರಾಜ್ಯದಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ನೈಜ ಮತದಾರರಿಗೆ ಅನ್ಯಾಯವಾಗದ ರೀತಿಯಲ್ಲಿ ಮನೆ ಮನೆಗೂ ಈಗ ಆಯೋಗಕ್ಕಿಂತ, ಸರ್ಕಾರವೇ ಮುಂದಾಗಿ ಮತದಾರರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ.
ರಾಜ್ಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ( ಎಸ್ ಐ ಆರ್) ಪ್ರಕ್ರಿಯೆ ಶುರುವಾಗಿದೆ. ಇದರ ಸಾಧಕ- ಬಾಧಕಗಳ ಬಗ್ಗೆ ದೇಶದಲ್ಲಿ ಕಳೆದ ಮೂರು ವರ್ಷಗಳಿಂದಲೂ ಭಾರಿ ಚರ್ಚೆ ಮುಂದುವರಿದಿದೆ. ಇದರ ಅಗತ್ಯ ಇದೆಯಾದರೂ, ಇದರ ರೂಪುರೇಷೆಗಳ ಬಗ್ಗೆ ಮತ್ತು ಚುನಾವಣೆ ಆಯೋಗವು ಕೈಗೆತ್ತಿಕೊಂಡಿರುವ ಈ ಪ್ರಕ್ರಿಯೆ ಕುರಿತು ಹಲವಾರು ಪ್ರಶ್ನೆಗಳು ಈಗಲೂ ಸಂದೇಹಗಳಾಗಿ ಉಳಿದಿದೆ. ಇದೇನೆ ಇರಲಿ. ದೇಶದಲ್ಲಿ ಚುನಾವಣೆ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು ಇದರ ಸ್ವತಂತ್ರ ಕಾರ್ಯ ನಿರ್ವಹಣೆ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಗಮನಾರ್ಹ.
ಮತದಾರರು ಎಂದಾಗ ರಾಜ್ಯದಲ್ಲಿಯೂ ಕೆಲವೊಂದು ಪ್ರಾತ್ಯಕ್ಷಿಕ ಸಮಸ್ಯೆಗಳು ತಲೆದೋರುವುದು ಖಂಡಿತ. ಬಹಳ ಮುಖ್ಯವಾಗಿ ಬೆಂಗಳೂರಿನಂತಹ ಮಹಾನಗರದಲ್ಲಿಂದು ಇತರೆ ರಾಜ್ಯಗಳ ಜನರ ಸಂಖ್ಯೆ ಬಹಳಷ್ಟಿದೆ. ಇವರೆಲ್ಲರೂ ರಾಜ್ಯದ ಮತದಾರರು ಅಲ್ಲ. ಅಸ್ಸಾಂ, ಪ. ಬಂಗಾಳ ಮತ್ತು ಜಮ್ಮು- ಕಾಶ್ಮೀರದಿಂದಲೂ ಬೆಂಗಳೂರಿಗೆ ಬಂದು ವಾಸ ಮಾಡುತ್ತಿರುವ ಕುಟುಂಬಗಳ ಸಂಖ್ಯೆ ನೂರಾರು. ಇವರನ್ನು ಮತದಾರರ ಪಟ್ಟಿಗೆ ಒಳಪಡಿಸುವುದೆಂದರೆ ಅದು ಸುಲಭದ ಕೆಲಸವಲ್ಲ. ದೇಶದ ಇತರ ಮಹಾ ನಗರಗಳಗಿಂತಲೂ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯ ಸಕ್ರಮ ಪರಿಷ್ಕರಣೆ ಎಂದರೆ ಚುನಾವಣೆ ಆಯೋಗಕ್ಕೆ ಇದೊಂದು ಅತಿ ದೊಡ್ಡ ಸವಾಲು.
ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ವಾಸವಾಗಿರುವ ಲಕ್ಷಾಂತರ ಮಂದಿ ಈಗಲೂ ಗುಜರಾತ್, ತಮಿಳುನಾಡು, ತೆಲಂಗಾಣ, ಆಂದ್ರ ರಾಜ್ಯಗಳ ಗುರುತಿನ ಚೀಟಿಗಳನ್ನೇ ಹೊಂದಿದ್ದಾರೆ. ಇನ್ನೂ ಕೆಲವರು ಎರಡೆರೆಡು ಕಡೆ ತಮ್ಮ ಗುರುತಿನ ಚೀಟಿಗಳನ್ನು ಹೊಂದಿರುವುದು ನಿಜ. ಬೆಳಗಾವಿ ಹುಬ್ಬಳ್ಳಿ, ಕಲಬುರಗಿಯಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಮತದಾರರ ಸಮಸ್ಯೆ ಕೂಡಾ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ವಾಸಿಗಳ ಸಮಸ್ಯೆಯೇ ಅತಿದೊಡ್ಡದು ! ವಿಧಾನಸಭೆ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವರ್ಷದಿಂದ ವರ್ಷಕ್ಕೆ ಬಾಡಿಗೆ ಮನೆ ಬದಲಾಯಿಸುವ ಬೆಂಗಳೂರಿಗರನ್ನು ಚುನಾವಣೆ ಆಯೋಗವು ಯಾವ ರೀತಿ ಮತ್ತು ಹೇಗೆ ಮತದಾರರ ಪಟ್ಟಿಯಲ್ಲಿ ಸೇರಿಸುತ್ತೆ ? ಇದಕ್ಕೆ ಸಂಬಂಧಿಸಿದ ಪೂರ್ವ ತಯಾರಿ ಮತ್ತು ಮಾಹಿತಿಗಳೇನು ? ಉದ್ಯೋಗ, ಟ್ರಾಫಿಕ್ ಮತ್ತು ನಗರದ ದಿನ ನಿತ್ಯ ಜಂಜಡಗಳಲ್ಲಿ ನಜ್ಜುಗುಜ್ಜಾದ ನಾಗರಿಕನಿಗೆ ಈ ಕುರಿತು ಸಮಗ್ರ ಮಾಹಿತಿ ನೀಡುವ ಪರಿಣಾಮಕಾರಿ ಕೆಲಸ ಅಧಿಕಾರಿ ವರ್ಗದಿಂದ ಸಮರ್ಪಕ ಮತ್ತು ಸಮರೋಪಾದಿಯಲ್ಲಿ ಆಗಬೇಕಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸ್ ಐ ಆರ್ ಶುರುವಾಗಿರುವುದನ್ನು ಗಮನಿಸುವಂತಹದು. ಪ. ಬಂಗಾಳದಲ್ಲಿ ಇದನ್ನು ಪದೇ ಪದೇ ಕೋರ್ಟಿಗೆ ತೆಗೆದುಕೊಂಡು ಹೋಗಿ, ತಮ್ಮ ವಾದದಲ್ಲಿ ಮಮತಾ ಬ್ಯಾನರ್ಜಿ ಪರಾಭವ ಹೊಂದಿದ್ದುಂಟು. ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದ್ದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ನೈಜ ಮತದಾರನಿಗೆ ಅನ್ಯಾಯವಾಗದ ರೀತಿಯಲ್ಲಿ ಮನೆ ಮನೆಗೂ ಈಗ ಆಯೋಗಕ್ಕಿಂತ, ಸರ್ಕಾರವೇ ವ್ಯಾಪಕ ಜಾಗೃತಿ ಮೂಡಿಸಬೇಕಿದೆ.


