ಬೆಂಗಳೂರಿನ ದೊಡ್ಡಕಮ್ಮನಹಳ್ಳಿಯಲ್ಲಿ ಮಹಿಳೆಯೊಬ್ಬರು ನಾಲ್ಕು ವರ್ಷದ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಬೇಕೆಂದು ಪಟ್ಟು ಹಿಡಿದಿದ್ದ ತಾಯಿ-ಮಗುವನ್ನು ಪೊಲೀಸರು ಮನವೊಲಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ, ಸ್ಥಳೀಯ ಯುವಕನಿಂದ ಅನ್ಯಾಯವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಒತ್ತಾಯಿಸಿ ದೊಡ್ಡಕಮ್ಮನಹಳ್ಳಿ ಸಮೀಪದ ನೋಬೋನಗರದ ಮಾರುತಿ ಡೆಂಟಲ್ ಕಾಲೇಜು ಸಮೀಪದ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದರು.
ಕೇರಳ ಮೂಲದ ಮರಿಯಾ (32) ಮತ್ತು ಮಗುವನ್ನು ರಕ್ಷಿಸಲಾಗಿದ್ದು, ಮಹಿಳೆಗೆ ಕೌನ್ಸೆಲಿಂಗ್ ನೀಡಲಾಗುತ್ತಿದೆ. ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಮರಿಯಾ ಇತ್ತೀಚೆಗೆ ಯಾವುದೇ ಕೆಲಸಕ್ಕೆ ಹೋಗುತ್ತಿರಲ್ಲಿಲ್ಲ. ಭಾನುವಾರ ಮಧ್ಯಾಹ್ನ ಕೊಠಡಿ ಮೇಲ್ಭಾಗದಲ್ಲಿರುವ ವಾಟರ್ ಟ್ಯಾಂಕ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹುಳಿಮಾವು ಠಾಣೆಯ ಪೊಲೀಸರು ಆಗಮಿಸಿ ಈ ಮಧ್ಯ ಅಗ್ನಿಶಾಮಕ ದಳ ಮತ್ತು ಸಿವಿಲ್ ಡಿಫೆನ್ಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಕಟ್ಟಡದ ಕೆಳಗೆ ಬಲೂನ್ ಬೆಡ್ ಸಿದ್ಧಪಡಿಸಿಕೊಂಡು ನಂತರ ಇನ್‌ಸ್ಪೆಕ್ಟರ್ ಜಗದೀಶ್ ಎರಡು ಗಂಟೆ ಆಕೆಯ ಮನವೊಲಿಸಿ ಕೆಳಗೆ ಇಳಿಸಿದ್ದಾರೆ.
ಮಹಿಳೆಯು ನನಗೆ ಪೊಲೀಸರು, ಕೋರ್ಟ್ ಹಾಗೂ ಸರ್ಕಾರದಿಂದ ಅನ್ಯಾಯವಾಗಿದೆ. ಯಾರ ಮೇಲೂ ನಂಬಿಕೆ ಇಲ್ಲ. ಇಳಿಯಬೇಕೆಂದರೆ ಕೂಡಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಪೊಲೀಸರು, ಭೇಟಿ ಮಾಡಿಸುವ ಭರವಸೆ ನೀಡಿದ ಬಳಿಕ ಆಕೆ ಇಳಿದು ಬಂದಿದ್ದಾರೆ. ಆಕೆ ಆರೋಪಿಸಿದ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಳಿಮಾವು ಠಾಣೆಯಲ್ಲಿ ದೂರು ದಾಖಲಾಗಿದೆ.


