ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಎರಡು ಸಾವಿರ ಅಡಿ ಕೆಳಗೆ ಹೋಗಿದೆ. ನಮ್ಮ ಸರ್ಕಾರ ಎತ್ತಿನಹೊಳೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕುಡಿಯುವ ನೀರು ತಂದೇ ತರುತ್ತೇವೆ. ಕೆರೆಗಳನ್ನು ತುಂಬಿಸುತ್ತೇವೆ. ನೀರನ್ನು ಈಗಾಗಲೇ ಹೊರಗೆ ತರುವಂತಹ ಶಕ್ತಿ ಭಗವಂತ ನನಗೆ ನೀಡಿದ್ದಾನೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಪಕ್ಕದ ಮೈದಾನದಲ್ಲಿ ಭಾನುವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿದರು.
ರಾಜ್ಯದಲ್ಲಿರುವ ಎಲ್ಲಾ ಕೆರೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸಿ ಈ ರೈತರ ಬದುಕನ್ನು ಹಸನು ಮಾಡುವ ಕೆಲಸವನ್ನ ನಾನು ಮಾಡಲಿದ್ದೇನೆ. ಹೊಸಕೋಟೆ ಕೆರೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಕೆರೆ ಸುತ್ತಮುತ್ತ ಇರುವಂತಹ ನಮ್ಮ ಕೆರೆಗಳಿಗೆ ಹೊಸ ರೂಪ ಕೊಡುವ ಕೆಲಸಕ್ಕೆ ಮಾರ್ಗದರ್ಶನ ಕೊಟ್ಟಿದ್ದೇನೆ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಎಲ್ಲ ಶೋಷಿತ ವರ್ಗಕ್ಕೆ ಬೆಳಕು ನೀಡಿದರು. ಭಾರತದ ಪ್ರಜೆಗಳು ಸಮಾನತೆಯಿಂದ ಬದುಕಲು ರೂಪುರೇಷೆ ನೀಡಿದ ಧೀಮಂತ ನಾಯಕ. ದೇಹದಲ್ಲಿ ಕೊನೆ ಹನಿ ರಕ್ತ ಇರುವ ತನಕ ಸಂವಿಧಾನವನ್ನ ರಕ್ಷಣೆಯನ್ನ ಮಾಡಬೇಕು ಎಂದು ಬಾಬಾಸಾಹೇಬರು ಹೇಳಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಮುನಿಯಪ್ಪನವರ ನೇತೃತ್ವದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಜನರ ಪರವಾಗಿ ದನಿ ಎತ್ತುವುದನ್ನು ಅಂಬೇಡ್ಕರ್ ಕಲಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಂದಿನ ಕಾಲದಲ್ಲೇ ಅಂಬೇಡ್ಕರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿ ದೇಶ ಕಟ್ಟುವ ಮುಂದಾಳತ್ವ ನೀಡಿತು. ಅವರ ನೇತೃತ್ವದಲ್ಲಿ ಸಂವಿಧಾನವು ಈ ದೇಶಕ್ಕೆ ಕೊಡುಗೆಯಾಗಿ ಸಿಕ್ಕಿತು. ಭೀಮಾ ಬಾಯಿಯವರು ಮಗುವಿಗೆ ಜನ್ಮ ನೀಡಲಿಲ್ಲ. ನಮ್ಮ ರಾಷ್ಟ್ರದ ಹಾಗೂ ಜನರ ಏಳಿಗೆಗೆ ಸಂವಿಧಾನವನ್ನು ಕೊಟ್ಟ ಶಕ್ತಿಗೆ ಜನ್ಮ ಕೊಟ್ಟರು ಎಂದರು.
136 ಸ್ಥಾನವನ್ನು ನೀಡಿ ಈ ರಾಜ್ಯದ ಆಡಳಿತ ನಡೆಸಲು ಜನ ಅವಕಾಶವನ್ನ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೂರು ವರ್ಷ ಕೆಲಸ ಮಾಡಿದ್ದೇವೆ. ಎಲ್ಲರಿಗೂ ಅತ್ಯುತ್ತಮ ಕಾರ್ಯಕ್ರಮ ಕೊಟ್ಟಿದ್ದೇವೆ. ಮುಂದಿನ ಎರಡು ವರ್ಷ ಅಲ್ಲ, 2028, 2029 ರಲ್ಲಿ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗುತ್ತದೆ ಎಂದು ಹೇಳಿದರು.
ಅಂಬೇಡ್ಕರ್ ಪುತ್ಥಳಿಯನ್ನು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಂದ ಉದ್ಘಾಟನೆ ಮಾಡಿಸಿದ್ದೇವೆ. ಬುದ್ಧ ಬಸವನು ಮನೆಬಿಟ್ಟ ಗಳಿಗೆಯಲ್ಲಿ, ಯೇಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲ್ಲಿ, ಪೈಗಂಬರವರು ದಿವ್ಯವಾಣಿ ನೀಡಿದ ಗಳಿಗೆಯಲ್ಲಿ, ಭೀಮಾ ಬಾಯಿ ಅಂಬೇಡ್ಕರ್ ಅವರಿಗೆ ಜನನ ನೀಡಿದ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಕಾಂಗ್ರೆಸ್ ನ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ ಗಳಿಗೆಯಲ್ಲಿ ಈ ಕಾರ್ಯಕ್ರಮ ನಡೆದಿದೆಎಂದು ಬಣ್ಣಿಸಿದರು.
ರಾಜ್ಯದ ಹಿಂದುಳಿದ ಪ್ರದೇಶದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಮಲ್ಲಿಕಾರ್ಜುನ ಖರ್ಗೆ 371 ಜೆ ತಿದ್ದುಪಡಿ ಮೂಲಕ ಕಲ್ಯಾಣ ಕರ್ನಾಟಕದ ಜನತೆಯ ಉದ್ದಾರಕ್ಕೆ ಮುನ್ನುಡಿ ಬರೆದವರು. ಅಲ್ಲಿನ ಜನರ ಬದುಕಿನಲ್ಲಿ ಬದಲಾವಣೆ ತಂದವರು ಎಂದು ಹೇಳಿದರು.
ನಿನ್ನ ಟೀಕಿಸುವವರಿಗೆ ಕೆಲಸದ ಮುಖಾಂತರ ಉತ್ತರ ಕೊಡಬೇಕು ಅನ್ನೋದನ್ನು ಹೇಳಿಕೊಟ್ಟವರು ಬಾಬಾ ಸಾಹೇಬರು. ಹಣೆಬರಹದಲ್ಲಿ ನಂಬಿಕೆ ಇಡಬೇಡ. ನಿನ್ನ ಶಕ್ತಿ ನಿನ್ನ ಕಾರ್ಯ ಮೇಲೆ ನಂಬಿಕೆ ಇಡಬೇಕು. ನಿನ್ನ ಶ್ರಮಕ್ಕೆ ಫಲ ಸಿಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದಾಗಿ ಸ್ಮರಿಸಿದರು.
ಕೆಂಪೇಗೌಡರ ಜಯಂತಿ ಅಂಗವಾಗಿ ಎಸ್ ಎಂ ಕೃಷ್ಣ ರಸ್ತೆಗೆ ಭೂಮಿ ನೀಡಿದ ರೈತರ ಹೆಸರಿರುವ ಗೋಡೆ ನಿರ್ಮಿಸಿ ಗೌರವ ನೀಡಲಾಗಿದೆ. ಮುಂದಿನ ದಿನದಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಈ ಭಾಗದ ಜನರು ಯೋಜನೆಗಳಿಗೆ ಭೂಮಿ ನೀಡಿ ತ್ಯಾಗ ಮಾಡುವಿರೋ ನಿಮ್ಮ ಹೆಸರುಗಳನ್ನು ಶಾಶ್ವತವಾಗಿ ಉಳಿಕೊಳ್ಳಲು ವಿಶೇಷವಾದಂತಹ ಕಾರ್ಯಕ್ರಮವನ್ನು ನಾನು ರೂಪಿಸುತ್ತೇನೆ ಎಂದರು.
ದೇವನಹಳ್ಳಿಗೆ ಮೆಟ್ರೋ ಬರಬೇಕು, ಹೊಸಕೋಟೆಗೆ ಮೆಟ್ರೋ ತಲುಪಬೇಕು. ಇದರ ಬಗ್ಗೆ ಈಗಾಗಲೇ ಡಿಪಿಆರ್ ತಯಾರಾಗುತ್ತಿದೆ. ರಾಜಘಟ್ಟದಲ್ಲಿ ಬೌದ್ಧ ಸಂಸ್ಕೃತಿಯ ಅಮೂಲ್ಯವಾದಂತಹ ಸಾವಿರಾರು ವರ್ಷಗಳ ಪುರಾತನ ಅವಶೇಷಗಳು ಬೆಳಕಿಗೆ ಬಂದಿವೆ. ಇದರ ಅಧ್ಯಯನಕ್ಕೆ ಸೂಚಿಸುತ್ತೇನೆ. ಅಧಿಕಾರಿಗಳ ತಂಡಗಳನ್ನು ರಚಿಸಿ ಈ ಭಾಗದಲ್ಲಿನ ಬೌದ್ದ ಸಂಸ್ಕೃತಿ, ಆ ಪರಂಪರೆಯನ್ನು ಉಳಿಸುವಂತಹ ಕೆಲಸ ಮಾಡುತ್ತೇವೆ ಎಂದರು.


