ಇಡೀ ವಿಶ್ವ ಬೆಂಗಳೂರನ್ನು ನೋಡುತ್ತಿದೆ. ಇದಕ್ಕೆ ಕಾರಣ ನಾಡಪ್ರಭು ಕೆಂಪೇಗೌಡರು. ಈ ನಗರದ ಅಭಿವೃದ್ದಿಗೆ 1.25 ಲಕ್ಷ ಕೋಟಿ ಕಾರ್ಯಕ್ರಮ ರೂಪಿಸಿದ್ದೇನೆ. ಕೆಂಪೇಗೌಡರು ಕೇವಲ ಒಕ್ಕಲಿಗರ ಆಸ್ತಿಯಲ್ಲ. ಎಲ್ಲಾ ಜಾತಿ ಧರ್ಮದವರನ್ನು ಸೇರಿಸಿ ಈ ಕಾರ್ಯಕ್ರಮ ರೂಪಿಸಬೇಕು. ಆಗ ಮಾತ್ರ ಕೆಂಪೇಗೌಡರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಯಲಹಂಕದಲ್ಲಿ ಬೆಂಗಳೂರು ಉತ್ತರ ತಾಲೂಕು ಒಕ್ಕಲಿಗರ ಸಮಿತಿ ಶನಿವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಿವಕುಮಾರ್ ಮಾತನಾಡಿದರು. ಕೆಂಪೇಗೌಡರು ಹುಟ್ಟಿದ್ದು ಒಕ್ಕಲಿಗನಾಗಿ ಬೆಳೆದಿದ್ದು ವಿಶ್ವಮಾನವನಾಗಿ. ಇದನ್ನು ಯಾರೂ ಸಹ ಮರೆಯಬಾರದು. ಈ ಹಾದಿಯಲ್ಲಿಯೇ ನಾವೆಲ್ಲರೂ ನಡೆಯಬೇಕು ಎಂದು ಕರೆ ನೀಡಿದರು.
ಇಡೀ ವಿಶ್ವ ಬೆಂಗಳೂರನ್ನು ನೋಡುತ್ತಿದೆ. ಇದಕ್ಕೆ ಕಾರಣ ನಾಡಪ್ರಭು ಕೆಂಪೇಗೌಡರು. 500 ವರ್ಷಗಳ ಹಿಂದೆ ಈ ಭೂಮಿಗೆ ಪೂಜೆ ಮಾಡಿ ನಗರ ನಿರ್ಮಾಣ ಮಾಡಿದರು. ಇದನ್ನು ಬೆಂಗಳೂರು ವಾಸಿಗಳು ಮರೆಯಬಾರದು. ಈ ನಗರ ನಿರ್ಮಾಣ ಮಾಡುವಾಗ ಇದು ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯುತ್ತದೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಆದರೆ ಅವರ ದೂರದೃಷ್ಟಿ ಇಲ್ಲಿ ಕೆಲಸ ಮಾಡಿದೆ ಎಂದರು.
ನಾವುಗಳು ಯಾರೂ ಬೆಂಗಳೂರು ಕಟ್ಟಿದವರಲ್ಲ. ಆದರೆ ನಾವಿರುವ ಈ ನಗರವನ್ನು ಉಳಿಸಿ ಬೆಳೆಸಬೇಕು. ಮನೆ ಹುಷಾರು, ಮಠ ಹುಷಾರು ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ನಾವು ನಮ್ಮ ಪರಂಪರೆ ಉಳಿಸಬೇಕು. ಕೆಂಪೇಗೌಡರು ಹಾಕಿಕೊಟ್ಟ ಅಡಿಪಾಯದಂತೆ ನಾವೆಲ್ಲರೂ ನಡೆಯುತ್ತಿದ್ದೇವೆ. ಅನೇಕ ವೃತ್ತಿಗಳನ್ನು ಉಳಿಸಲು ಮಾರ್ಗದರ್ಶನ ನೀಡಿದರು. ಅವರು ಹಾಕಿದ ಸಂಪ್ರದಾಯದಂತೆ ನಾವು ನಡೆಯುತ್ತಿದ್ದೇವೆ ಎಂದರು.
ಬೆಂಗಳೂರಿನಲ್ಲಿ ವಿದ್ಯೆ, ಆರೋಗ್ಯ, ವೃತ್ತಿ ದೊರೆಯುತ್ತದೆ. ಇಲ್ಲಿ ಪ್ರತಿಯೊಬ್ಬರೂ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅನೇಕರು ಈ ನಗರಕ್ಕೆ ಬರುತ್ತಿದ್ದಾರೆ. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನಗರ ವಿಸ್ತರಣೆ ಆಗುತ್ತಲೇ ಇದೆ. ಈ ನಗರಕ್ಕೆ ಬರುವವರನ್ನು ನಾವು ತಡೆಯಲು ಸಾಧ್ಯವಿಲ್ಲ. ಅದಕ್ಕೆ ‘ವರ್ಟಿಕಲ್ ಬೆಳವಣಿಗೆ’ ಬಗ್ಗೆ ನಾನು ಆಲೋಚನೆ ಮಾಡುತ್ತಿದ್ದೇನೆ ಎಂದು ಸಿಎಂ ಹೇಳಿದರು.
ಎಲ್ಲಾ ಧರ್ಮ, ಜಾತಿಗಳಿಗೆ ಇಲ್ಲಿ ಬದುಕನ್ನು ಕಟ್ಟಿಕೊಳ್ಳಲು ನಾವು ಆಸ್ಪದ ನೀಡಬೇಕಿದೆ. ದೇಹಕ್ಕೆ ಹೃದಯ ಮುಖ್ಯ. ಅದೇ ರೀತಿ ರಾಜ್ಯಕ್ಕೆ ಬೆಂಗಳೂರು ಮುಖ್ಯ. ಈ ಹಿಂದೆ ವಾಜಪೇಯಿ ಅವರು ಬೆಂಗಳೂರು ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದಾಗ ‘ಜಗತ್ತಿನ ಎಲ್ಲಾ ನಾಯಕರು ಈ ಮೊದಲು ದೆಹಲಿ, ಚೆನ್ನೈ, ಕಲ್ಕತ್ತಾಗೆ ಹೋಗುತ್ತಿದ್ದರು. ಆದರೆ ಈಗ ಬೆಂಗಳೂರು ನಂತರ ದೆಹಲಿಗೆ ಬರುವ ಸಂದರ್ಭ ಬಂದಿದೆ ಎಂದು ಹೇಳಿದ್ದರು ಎಂದರು.
ಬೆಂಗಳೂರಿನ ಆಸ್ತಿ ಮಾಲೀಕರ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇ ಖಾತ ಮೂಲಕ ಭೂ ಗ್ಯಾರಂಟಿ ನೀಡಲಾಗಿದೆ. ಈ ನಗರಕ್ಕೆ ಬಂದು ಕಷ್ಟ ಪಟ್ಟು ಆಸ್ತಿ ಸಂಪಾದಿಸಿದ್ದಾರೆ ಅವರ ಪರವಾಗಿ ನಮ್ಮ ಸರ್ಕಾರ ನಿಂತಿದೆ. ಬಿ ಖಾತೆಯಿಂದ ಎ ಖಾತೆ ಮಾಡಿಕೊಡಲಾಗುತ್ತಿದೆ. ಕಷ್ಟಕಟ್ಟು ಆಸ್ತಿ ಸಂಪಾದಿಸಿದವರ ಪರವಾಗಿ ನಮ್ಮ ಸರ್ಕಾರವಿದೆ ಎಂದು ಹೇಳಿದರು.
ಕೃಷ್ಣ ಬೈರೇಗೌಡರು ವಿಮಾನ ನಿಲ್ದಾಣ ರಸ್ತೆಯಲ್ಲೇ ಬೆಂಗಳೂರು ಉತ್ತರದ ಕಚೇರಿಯನ್ನು ಬಹಳ ವಿಜೃಂಭಣೆಯಿಂದ ಕಟ್ಟಬೇಕು ಎಂದು ಜಾಗವನ್ನು ನಿಗದಿ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಎಂದರೆ ಜನಸಾಮಾನ್ಯರ ಅಭಿವೃದ್ಧಿ ಎಂದು ಹೇಳಿದರು.
ಕೆಎಚ್ ಬಿಯಿಂದ ಬೆಂಗಳೂರು ಉತ್ತರ ತಾಲೂಕು ಒಕ್ಕಲಿಗರ ಸಂಘಕ್ಕೆ ನೀಡಿರುವ ನಿವೇಶನಕ್ಕೆ 3.5 ಕೋಟಿ ಕಟ್ಟಬೇಕು ಎಂದು ಹೇಳಲಾಗಿತ್ತು. ಇದರ ಬಗ್ಗೆ ಸಂಸದ ಸುಧಾಕರ್ , ಮಾಜಿ ಶಾಸಕ ಗಂಟಿಗಾನಹಳ್ಳಿ ಕೃಷ್ಣಪ್ಪ ಅವರು ದರ ಕಡಿಮೆಗೆ ಮನವಿ ಮಾಡಿದ್ದಾರೆ. ಎಲ್ಲರ ಮನವಿಯಂತೆ ಈ ಜಾಗಕ್ಕೆ ಶೇ 10 ರಷ್ಟು ದರ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದರು.
ಕಳೆದ ಮೂರು ವರ್ಷಗಳಿಂದ ಉತ್ತಮವಾಗಿ ಮಳೆ ಬಂದಿತ್ತು. ಆದರೆ ಈ ವರ್ಷ ಇಡೀ ದೇಶದಲ್ಲಿ ಬರಗಾಲ ಆಗುವ ಸಂಭವಿಸಿದೆ. ನಾವೆಲ್ಲರೂ ಸೇರಿ ಬರಗಾಲ ಎದುರಿಸಬೇಕು. ರೈತರನ್ನು ಉಳಿಸಬೇಕು ಎಂದು ತಿಳಿಸಿದರು.
ತುಂಗಭದ್ರಾ ಅಣೆಕಟ್ಟು ಉಳಿಸಲು ಮೂರು ರಾಜ್ಯದ ಮುಖ್ಯಮಂತ್ರಿಗಳು ಸೇರಿ ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ತೀರ್ಮಾನ ಮಾಡಿದ್ದೇವೆ. ಈ ಹಿಂದೆ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ಕಾವೇರಿ ಕುಡಿಯುವ ನೀರಿನ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಅದೇ ರೀತಿ ಕೇಂದ್ರ ಜಲಶಕ್ತಿ ಸಚಿವರ ನೇತೃತ್ವದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ ರೆಡ್ಡಿ ಹಾಗೂ ನಾನು ಸಭೆ ನಡೆಸಿ ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಈ ನೆಲ ಜಲಕ್ಕಾಗಿ ನಾವುಗಳೇ ಸಂಘರ್ಷ ಮಾಡಿಕೊಳ್ಳಬಾರದು. ನಾವೆಲ್ಲರೂ ಭಾರತೀಯರು, ಮಣ್ಣಿನ ಮಕ್ಕಳು. ಈ ಬೆಂಗಳೂರು ರೈತರ ತ್ಯಾಗದಿಂದ ಬೆಳೆದಿದೆ ಎಂದರು.
ನಂತರ ಶಿವಕುಮಾರ್ ವಿಧಾನಸೌಧದ ಆವರಣದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಬೆಂಗಳೂರನ್ನು ಮತ್ತೆ ಉದ್ಯಾನ ನಗರಿ ಮಾಡಲು ಇಂದು 15 ಲಕ್ಷ ಸಸಿ ನೆಡುತ್ತಿದ್ದೇವೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಅರಣ್ಯ ಇಲಾಖೆ ಜಾಗಗಳಲ್ಲಿ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಬೆಂಗಳೂರಿನಲ್ಲಿ ಹಸಿರು ಉಳಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.


