Menu

50 ಲಕ್ಷ ರೂ. ಕೊಡದಿದ್ದರೆ ಏಡ್ಸ್‌ ಇದೆಯೆಂದು ಪ್ರಚಾರ: ವಿಚ್ಛೇದಿತ ಪತ್ನಿ ವಿರುದ್ಧ ಉದ್ಯಮಿ ದೂರು

ಐವತ್ತು ಲಕ್ಷ ರೂ. ಕೊಡದಿದ್ದರೆ ಎಚ್‌ಐವಿ/ಏಡ್ಸ್‌ ಸೋಂಕು ಇದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಸಿದ ವಿಚ್ಛೇದಿತ ಪತ್ನಿ ವಿರುದ್ಧ ಬೆಂಗಳೂರಿನ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಉದ್ಯಮಿ ನೀಡಿರುವ ದೂರಿನ ಆಧಾರದಲ್ಲಿ ಮಾರತ್ತಹಳ್ಳಿ ಪೊಲೀಸರು 37 ವರ್ಷದ ಸ್ವಾತಿ ಬಿ. ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳವು, ಸುಲಿಗೆ, ಮಾನಹಾನಿ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಕಂಪ್ಯೂಟರ್ ಏಡೆಡ್ ಡಿಸೈನ್ ಅಂಡ್ ಡ್ರಾಫ್ಟಿಂಗ್ ತರಬೇತಿ ಸಂಸ್ಥೆ ನಡೆಸುತ್ತಿರುವ 51 ವರ್ಷದ ಉದ್ಯಮಿ 2021ರ ಅಕ್ಟೋಬರ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಸ್ವಾತಿಯನ್ನು ಪರಿಚಯಿಸಿಕೊಂಡು 2022ರ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಮದುವೆ ಬಳಿಕ ಮಹಿಳೆ ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಸುಳ್ಳು ಆರೋಪಗಳನ್ನು ಹರಡುತ್ತೇನೆ ಎಂದು ಉದ್ಯಮಿಗೆ ಬೆದರಿಕೆ ಹಾಕಿದ್ದಾಳೆ.

ಐವತ್ತು ಲಕ್ಷ ರೂ. ನೀಡದಿದ್ದರೆ ನಿಮಗೆ ಎಚ್‌ಐವಿ ಇದೆ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೀರಿ ಎಂದು ಸುಳ್ಳು ಪ್ರಚಾರ ಮಾಡುವುದಾಗಿ ಪತ್ನಿ ತನಗೆ ಬೆದರಿಕೆ ಹಾಕಿರುವುದಾಗಿ ಉದ್ಯಮಿ ದೂರಿನಲ್ಲಿ ವಿವರಿಸಿದ್ದಾರೆ.
ಆಕೆ ಮನೆಯಿಂದ 18 ಲಕ್ಷ ನಗದು, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದಲ್ಲದೆ ನಕಲಿ ಕೀ ಬಳಸಿ ಕಾರು ತೆಗೆದುಕೊಂಡು ಹೋಗಿದ್ದಾಳೆ. ಸಾಲದ್ದಕ್ಕೆ ಕಚೇರಿಗೆ ಹಾನಿ ಮಾಡುವ ಜೊತೆಗೆ ಚೆಕ್‌ಗೆ ನಕಲಿ ಸಹಿ ಹಾಕಿ ಬ್ಯಾಂಕ್ ಖಾತೆಯಿಂದ 83 ಸಾವಿರ ರೂ. ಡ್ರಾ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಸ್ವಾತಿ ತನ್ನನ್ನು ಮದುವೆಯಾಗುವ ಮೊದಲು ಆಕೆ ಮೂರು ಬಾರಿ ಮದುವೆಯಾಗಿದ್ದಳು. ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು, ಏನು ಬೇಕಾದರೂ ಮಾಡಬಲ್ಲೆ ಎಂದು ಆಗಾಗ ಬೆದರಿಸುತ್ತಿದ್ದಳು. ಈ ಹಿಂದಿನ ಮದುವೆಯಲ್ಲಿ ಆಕೆಗೆ ಜನಿಸಿದ್ದ ಮಗನ ಶಿಕ್ಷಣಕ್ಕಾಗಿ ತನ್ನಿಂದ ಹೆಚ್ಚಿನ ಹಣ ಖರ್ಚು ಮಾಡಿಸಿದ್ದಾಳೆ ಎಂದು ಉದ್ಯಮಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *