Menu

ರಾಜ್ಯದ ಹಲವು ಕೋರ್ಟ್‌ಗಳಿಗೆ ಹುಸಿ ಬಾಂಬ್‌ ಬೆದರಿಕೆ

ರಾಜ್ಯದ ಹಲವು ನ್ಯಾಯಾಲಯ ಕಟ್ಟಡಗಳಿಗೆ ಹುಸಿ ಬಾಂಬ್‌ ಬೆದರಿಕೆ ಕರೆ ಬಂದಿದೆ. ಬಾಗಲಕೋಟೆ, ದಾವಣಗೆರೆ, ಧಾರವಾಡ, ಕೋಲಾರ ಜಿಲ್ಲಾ ನ್ಯಾಯಾಲಯಗಳಿಗೆ ಅನುಮಾನಾಸ್ಪದ ಐಡಿಯಿಂದ ಬಾಂಬ್ ಬೆದರಿಕೆಯ ಇ-ಮೇಲ್​​​​ಗಳು ಬಂದಿವೆ. ಹೀಗಾಗಿ ಕೋರ್ಟ್‌ ಆವರಣಗಳಲ್ಲಿ ಆತಂಕ ಸೃಷ್ಟಿಯಾಗಿತ್ತು, ಪೊಲೀಸರು ತಪಾಸಣೆ ನಡೆಸಿದ್ದಾರೆ.

ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ karunanidhi.kundi@underworld.dog ಎಂಬ ಐಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಮಧ್ಯಾಹ್ನ 2 ಗಂಟೆಗೆ 23 ಸೈನೈಡ್ ವಾಯು ಗುಂಡಿಗಳು ಸ್ಫೋಟವಾಗಲಿವೆ ಎಂದು ಉಲ್ಲೇಖಿಸಲಾಗಿದೆ.

ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರಿಗೆ ಮೇಲ್ ಬಂದಿದ್ದು, ಈ ಬೆಳವಣಿಗೆ ನ್ಯಾಯಾಂಗ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ಜಡ್ಜ್ ಹಾಲ್, ಕೊಠಡಿಗಳು ಸೇರಿ ಇಡೀ ಕೋರ್ಟ್ ತಪಾಸಣೆ ನಡೆಸಲಾಗಿದೆ. ಯಾವುದೇ ಅಹಿತಕರ ವಸ್ತು ಪತ್ತೆಯಾಗಿಲ್ಲ.

ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ಇರುವ ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್​ ಐಡಿಗೆ ವಯನಾಡಿನಿಂದ ಬಾಂಬ್‌ ಬೆದರಿಕೆ ಸಂದೇಶ‌ ಬಂದಿದೆ. ಪೊಲೀಸರು, ಶ್ವಾನದಳದೊಂದಿಗೆ ತಪಾಸಣೆ ಮಾಡಿಸಿದ್ದಾರೆ. ಕೋಲಾರ ಜಿಲ್ಲಾ ನ್ಯಾಯಾಲಯಕ್ಕೂ ಇ-ಮೇಲ್ ಮೂಲಕ ಸಂದೇಶ ಬಂದಿದೆ. ಕೋರ್ಟ್ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಕೋಲಾರ ಗಲ್ ಪೇಟೆ ಪೊಲೀಸರು ಪರಿಶೀಲನೆ ಮಾಡಿದರು.

ಕೋರ್ಟ್ ಹಾಗೂ ಕಾಂಪ್ಲೆಕ್ಸ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಉಪನಗರ ಠಾಣಾ ವ್ಯಾಪ್ತಿಯ ಧಾರವಾಡ ಜಿಲ್ಲಾ ಕೋರ್ಟ್‌ಗೂ ಬಾಂಬ್ ಬೆದರಿಕೆ ಕರೆ ಬಂದಿದೆ. ಅಪರಿಚಿತನ ಬಾಂಬ್​ ಕರೆ ಕೋರ್ಟ್ ಸುತ್ತಮುತ್ತ ಆತಂಕ ಸೃಷ್ಟಿಸಿತ್ತು. ವಕೀಲರು ಮತ್ತು ಕಕ್ಷಿದಾರರು ನ್ಯಾಯಾಲಯ ಆವರಣದಿಂದ ಹೊರಬಂದಿದ್ದಾರೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಆಗಮಿಸಿ ಕೋರ್ಟ್‌ನ ಒಳಗಡೆ ತಪಾಸಣೆ ಮಾಡಿದೆ.

Related Posts

Leave a Reply

Your email address will not be published. Required fields are marked *