ದೇಶದ ಎಲ್ಲ ಪ್ರಾಥಮಿಕ ಶಾಲೆ ಶಿಕ್ಷಕರು ೨೦೨೮ ಆಗಸ್ಟ್೩೧ ರೊಳಗೆ ಟಿಇಟಿ ಪರೀಕ್ಷೆ ಪಾಸು ಮಾಡಿರಲೇಬೇಕು. ಇಲ್ಲದಿದ್ದಲ್ಲಿ ಅವರು ಕಡ್ಡಾಯ ನಿವೃತ್ತಿ ಪಡೆಯಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಖಡಕ್ ಆದೇಶ ಹೊರಡಿಸಿದೆ. ಈ ಆದೇಶ ೧.೨೦ ಲಕ್ಷ ಶಿಕ್ಷಕರಿಗೆ ರಾಜ್ಯದಲ್ಲಿ ಅನ್ವಯವಾಗುತ್ತದೆ.
೨೦೧೧ ರಲ್ಲಿ ಮಕ್ಕಳ ಶಿಕ್ಷಣ ಹಕ್ಕು ಜಾರಿಗೆ ಬಂದಿತು. ಅದರಲ್ಲಿ ಪ್ರಾಥಮಿಕ ಶಿಕ್ಷಕರ ಅರ್ಹತೆಯನ್ನು ಟಿಇಟಿ ಕಡ್ಡಾಯ ಮಾಡಲಾಗಿದೆ. ಇದರಿಂದ ಕಾಯ್ದೆಬರುವುದಕ್ಕೆ ಮೊದಲೇ ಕೆಲಸಕ್ಕೆ ಸೇರಿದ ಶಿಕ್ಷಕರಿಗೆ ಪ್ರಾಣ ಸಂಕಟ ತಂದಿದೆ. ಅವರು ಈ ಪರೀಕ್ಷೆಯಿಂದ ವಿನಾಯಿತಿ ಕೊಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಒಪ್ಪಿಲ್ಲ. ಟಿಇಟಿ ಪರೀಕ್ಷೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವರ್ಷಕ್ಕೆ ಎರಡು ಬಾರಿ ನಡೆಸಬೇಕೆಂದು ನ್ಯಾಯಾಲಯ ಸೂಚಿಸಿದೆ. ಎಸ್ಎಸ್ಎಲ್ಸಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವವರು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಬಿಎಡ್ ಪಾಸಾಗಿದ್ದರೂ ಇದು ಕಡ್ಡಾಯ. ಹೀಗಾಗಿ ಇದಕ್ಕೆ ಬೇಡಿಕೆ ಅಧಿಕಗೊಂಡಿದೆ.
ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ೫ ವರ್ಷಕ್ಕಿಂತ ಕಡಿಮೆ ಅವಧಿಯ ಸೇವೆ ಸಲ್ಲಿಸಬೇಕಿದ್ದರೆ ಅಂಥವರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಯಾರೇ ಬಡ್ತಿ ಪಡೆಯಬೇಕಾದರೂ ಇದನ್ನು ಪಾಸು ಮಾಡುವುದು ಕಡ್ಡಾಯ. ಮಕ್ಕಳ ಶಿಕ್ಷಣ ಹಕ್ಕು ಜಾರಿಗೆ ಬರಬೇಕು ಎಂದರೆ ಶಿಕ್ಷಕರ ಅರ್ಹತೆ ಕೂಡ ಮುಖ್ಯ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹೇಗಿರುತ್ತದೆ ಎಂಬ ಪರಿಜ್ಞಾನ ಶಿಕ್ಷಕರಿಗೆ ಇರಬೇಕು. ಟಿಇಟಿ ಪರೀಕ್ಷೆಯಲ್ಲಿ ಇದನ್ನು ಕಲಿಯುವುದರಿಂದ ಶಿಕ್ಷಕರಿಗೆ ಉತ್ತಮ ಶೈಕ್ಷಣಿಕ ಹಿನ್ನೆಲೆ ದೊರಕಿದಂತಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಈ ಆದೇಶ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನ್ವಯ. ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ನಾತಕೋತ್ತರ ಪದವಿ ಪಡೆದವರನ್ನು ನೇಮಿಸಿಕೊಳ್ಳುತ್ತಿದೆ. ಆದರೆ ಅವರಿಗೆ ಮಕ್ಕಳ ಮನೋಧರ್ಮ ತಿಳಿದಿರುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶ ಈಗ ಎಲ್ಲರಿಗೂ ಟಿಇಟಿ ಪರೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯ ಎಂಬುದು ಸ್ಪಷ್ಟ. ನಿರುದ್ಯೋಗದ ಸಮಸ್ಯೆಯಿಂದ ಹೆಚ್ಚಿನ ವಿದ್ಯಾರ್ಹತೆ ಪಡೆದವರು ಕಡಿಮೆ ಅರ್ಹತೆ ಬೇಕಿರುವ ಹುದ್ದೆಗಳಿಗೆ ಬಂದುಬಿಡುವುದು ದೊಡ್ಡ ಸಮಸ್ಯೆಯಾಗಿದೆ. ಕಡಿಮೆ ವಿದ್ಯಾರ್ಹತೆ ಇರುವವರಿಗೆ ಕೆಲಸ ಸಿಗುವುದು ಕಷ್ಟವಾಗಿದೆ. ಅದರಿಂದ ಈಗ ಹೆಚ್ಚಿನ ವಿದ್ಯಾರ್ಹತೆ ಇರುವವರನ್ನು ಶಿಕ್ಷಣ ಸಂಸ್ಥೆಗಳು ಸಂದರ್ಶನಕ್ಕೆ ಕರೆಯುವುದನ್ನು ಕಡಿಮೆ ಮಾಡಿದೆ. ಹುದ್ದೆ ಮತ್ತು ಶೈಕ್ಷಣಿಕ ಅರ್ಹತೆ ಸಮಾನವಾಗಿರಬೇಕು. ಇಲ್ಲದಿದ್ದಲ್ಲಿ ಅನಗತ್ಯವಾಗಿ ಶಿಕ್ಷಕವರ್ಗದಲ್ಲಿ ಅಸಮಾನತೆ ಸೃಷ್ಟಿಯಾಗುತ್ತದೆ. ಅದೇರೀತಿ ಪ್ರಾಥಮಿಕ ಶಾಲೆಗಳಿಗೆ ಮಿತಿ ವಿಧಿಸಬಾರದು. ಒಂದು ಶಾಲೆಗೆ ಮತ್ತೊಂದು ಶಾಲೆಗೂ ಇಷ್ಟು ಅಂತರ ಇರಬೇಕೆಂಬ ನಿಯಮ ಅನುಸರಿಸುವುದು ಸರಿಯಲ್ಲ. ಪುಟ್ಟ ಮಕ್ಕಳು ಹೆಚ್ಚು ದೂರ ಶಾಲೆಗೆ ಹೋಗುವಂತೆ ಇರಬಾರದು. ಅಲ್ಲದೆ ಶಾಲೆ ಕೆಲವು ಗಂಟೆ ನಡೆಯುವುದರಿಂದ ಮಕ್ಕಳನ್ನು ಕರೆದುಕೊಂಡು ಬಿಡುವುದು ಮತ್ತು ಕರೆದು ಕೊಂಡು ಹೋಗಲು ಸಮೀಪ ಇರಬೇಕು.
ಶಾಲೆಗಳ ಸಂಖ್ಯೆ ಅಧಿಕವಾಗಿದ್ದಲ್ಲಿ ಶಿಕ್ಷಣ ಶುಲ್ಕ ಕೂಡ ಕಡಿಮೆ ಇರುತ್ತದೆ. ಕೆಲವು ಶಾಲೆಗಳು ಕೋಳಿ ಗೂಡಿನ ಹಾಗೆ ಗಾಳಿ ಬೆಳಕು ಇರುವುದಿಲ್ಲ. ಅಂಥ ಶಾಲೆಗಳಿಗೆ ಅನುಮತಿ ಕೊಡಬಾರದು. ಮಕ್ಕಳು ಕುಳಿತುಕೊಳ್ಳುವ ತರಗತಿಯಲ್ಲಿ ಗಾಳಿ ಮತ್ತು ಬೆಳಕು ಚೆನ್ನಾಗಿರಬೇಕು. ಅಲ್ಲದೆ ಟ್ಯೂಬ್ ಲೈಟ್ ಬಳಸದಂತೆ ನಿಯಮ ಮಾಡಬೇಕು. ಟ್ಯೂಬ್ ಲೈಟ್ನಲ್ಲಿ ಮಕ್ಕಳು ಓದಿದರೆ ಆ ಮಕ್ಕಳಿಗೆ ದೃಷ್ಟಿದೋಷ ಬಹಳ ಬೇಗನೇ ಬರುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗ್ರಾಮೀಣ ಸರ್ಕಾರಿ ಶಾಲೆ ಮತ್ತು ನಗರದ ಖಾಸಗಿ ಶಾಲೆ ಮಕ್ಕಳ ಆರೋಗ್ಯ ಪರಿಶೀಲಿಸಿದರೆ ತಿಳಿಯುತ್ತದೆ.


