ಚಿಕ್ಕಮಗಳೂರಿನ ಪೋಷಕರು ಹಣದಾಸೆಗೆ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂತ್ರಸ್ತೆ ನಂದಿತಾ ವೀಡಿಯೊ ಮೂಲಕ ಸಹಾಯ ಯಾಚಿಸಿದ ನಂತರ ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಆಕೆಯನ್ನು ರಕ್ಷಿಸಲಾಗಿದೆ. ಆಕೆಯ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಹೆಚ್ಚಿದೆ.
ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ಮಗಳನ್ನು ವಿದೇಶಕ್ಕೆ ಕರೆದೊಯ್ದು ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಲಾಗಿತ್ತು. ಚಿಕ್ಕಮಗಳೂರು ಮಲ್ಲೇನಹಳ್ಳಿ ಗ್ರಾಮದ ಸಮೀಪವಿರುವ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಮತ್ತು ರಾಜಶೇಖರ್ ಎಂಬ ದಂಪತಿಯ ಮಗಳು ನಂದಿತಾ. ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಕುಟುಂಬವು ಗಿಡಮೂಲಿಕೆ ಮತ್ತು ಸಾಂಪ್ರದಾಯಿಕ ಔಷಧ ವ್ಯಾಪಾರಕ್ಕಾಗಿ ನಾಲ್ಕು ತಿಂಗಳ ಹಿಂದೆ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ತೆರಳಿತ್ತು.
ಮಗಳು ನಂದಿತಾಳನ್ನು ಕರೆದೊಯ್ದಿದ್ದ ಪೋಷಕರು, 10 ದಿನಗಳ ಹಿಂದೆ ಹಣದಾಸೆಗೆ ಅಲ್ಲಿನ ವೇಶ್ಯಾವಾಟಿಕೆ ದಂಧೆಕೋರರಿಗೆ ಏಳು ಲಕ್ಷ ರೂಪಾಯಿಗೆ ಮಾರಾಟ ಮಾಡಿ ಬಳಿಕ ಭಾರತಕ್ಕೆ ವಾಪಸಾಗಿದ್ದಾರೆ. ಮಗಳು ಭಾರತಕ್ಕೆ ಮರಳಿದ್ದಾಳೆ, ನಮಗಿಂತ ಮೊದಲೇ ಊರಿಗೆ ಹೋಗಿದ್ದಾಳೆ ಎಂದು ಸ್ಥಳೀಯರ ಬಳಿ ಸುಳ್ಳು ಕಥೆ ಹೇಳಿದ್ದರು.
ನಂದಿತಾ ಧೈರ್ಯಗೆಡದೆ ಕಷ್ಟಪಟ್ಟು ಸೆನೆಗಲ್‌ನಿಂದಲೇ ತನಗೆ ಪರಿಚಯವಿದ್ದವರನ್ನು ಸಂಪರ್ಕಿಸಿ ತಂದೆ-ತಾಯಿಯೇ ಹಣಕ್ಕಾಗಿ ವೇಶ್ಯಾವಾಟಿಕೆಗೆ ಮಾರಾಟ ಮಾಡಿರುವ ವಿಚಾರ ತಿಳಿಸಿದ್ದಾಳೆ. ಆಗಿರುವ ಅನ್ಯಾಯ ಮತ್ತು ಅಲ್ಲಿ ಅನುಭವಿಸುತ್ತಿರುವ ಚಿತ್ರಹಿಂಸೆಯ ಬಗ್ಗೆ ವೀಡಿಯೊ ಮಾಡಿ ಕಳುಹಿಸಿದ್ದಾಳೆ. ವೀಡಿಯೊ ಊರಿನವರಿಗೆ ತಲುಪಿ ವಿಷಯ ಬಹಿರಂಗಗೊಂಡಿದೆ. ಸ್ಥಳೀಯರು ಹಾಗೂ ಸಂಘಟನೆಯವರು ಭಾರತೀಯ ರಾಯಭಾರ ಕಚೇರಿಗೆ ವಿಷಯ ಮುಟ್ಟಿಸಿ, ಸೆನಗಲ್‌ನ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ನಂದಿತಾಳನ್ನು ರಕ್ಷಿಸಲಾಗಿದೆ.
ಮಗಳನ್ನು ರಕ್ಷಿಸಿರುವ ವಿಷಯ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಕ್ರಾಂತಿ ಮತ್ತು ರಾಜಶೇಖರ್ಊರಿಗೆ ಮರಳಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಂದಿತಾಗೆ ಸೂಕ್ತ ನ್ಯಾಯ ಕೊಡಿಸಬೇಕು ಮತ್ತು ಆಕೆಯ ಪೋಷಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಮುಖಂಡರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.


