ಬೀದರ್‌ನ ಬ್ರಿಮ್ಸ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಪೋಸ್ಟ್‌ಮಾರ್ಟ್‌ಮ್ ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಆರೋಪದ ಮೇಲೆ ಅಟೆಂಡರ್ ಒಬ್ಬನನ್ನು ಬಂಧಿಸಲಾಗಿದೆ.
ಆರೋಪಿ ಮುನೀರ್ ಅಹ್ಮದ್ ಬಂಧಿತ, ಹಲವು ವರ್ಷಗಳಿಂದ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಾನೆ. ಪೋಸ್ಟ್‌ಮಾರ್ಟ್‌ಮ್ ಪ್ರಕ್ರಿಯೆ ವೇಳೆ ಮಹಿಳಾ ಶವಗಳ ಫೋಟೋಗಳನ್ನು ರಹಸ್ಯವಾಗಿ ತೆಗೆದು ಸಂಗ್ರಹಿಸಿಡುತ್ತಿದ್ದನೆಂಬ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಹಲವು ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳು ಪತ್ತೆಯಾಗಿವೆ. ಇದರಿಂದ ಆತ ಹಲವು ವರ್ಷಗಳಿಂದ ಈ ವಿಕೃತ ಕೃತ್ಯ ಎಸಗುತ್ತಿದ್ದಾನೆ ಎಂಬ ಅನುಮಾನವಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬ್ರಿಮ್ಸ್ ಮುಖ್ಯಸ್ಥ ಡಾ. ಮೊಸಿನ್ ಉಲ್ ಹಕ್ ನ್ಯೂಟೌನ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದ ಆಧಾರದ ಮೇಲೆ ಪೊಲೀಸರು ಮುನೀರ್ ಅಹ್ಮದ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


