ಬ್ಯಾಂಕುಗಳಿಂದ ಸಾಲ ಪಡೆದ ಆಸ್ತಿ-ಕಟ್ಟಡಗಳ ಮಾಲೀಕರು ಸುಸ್ತಿದಾರರಾದಾಗ, ಆ ಆಸ್ತಿಯಲ್ಲಿ ವಾಸವಿರುವ ಅಥವಾ ಕಚೇರಿ ಹೊಂದಿರುವ ಬಾಡಿಗೆದಾರರು ಸಾಲ ವಸೂಲಿಗೆ ನ್ಯಾಯಾಧಿಕರಣ (ಡಿಆರ್ಟಿ) ನೀಡಿದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಾಲದ ಮೊತ್ತದ ಶೇ.50 ಠೇವಣಿ ಇಡಬೇಕು ಎನ್ನುವುದು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಇಟ್ಟಿಯಂ ಸಿಸ್ಟಮ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ, ಕಟ್ಟಡದಲ್ಲಿರುವ ಬಾಡಿಗೆದಾರರನ್ನು ಯಾವುದೇ ಕಾರಣಕ್ಕೂ ಸಾಲಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸಾಲದ ಹೊಣೆಗಾರಿಕೆಯನ್ನು ಬಾಡಿಗೆದಾರನ ಮೇಲೆ ಹೇರಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಣಕಾಸು ಆಸ್ತಿಗಳ ಸಕ್ಯುರಿಟೈಸೇಶನ್ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿ ಜಾರಿ(ಸರ್ಫೇಸಿ) ಕಾಯ್ದೆಯ ಸೆಕ್ಷನ್ 18ರ 2ನೇ ನಿಬಂಧನೆಯಲ್ಲಿ ‘ಸಾಲಗಾರ’ ಮಾತ್ರ ಶೇ.50 ಪೂರ್ವ ಠೇವಣಿ ಇಡಬೇಕು ಎಂದು ಹೇಳಲಾಗಿದೆ. ಸಾಲಗಾರನಲ್ಲದ ವ್ಯಕ್ತಿಯ ಮೇಲೆ ಸಾಲದ ಹೊರೆ ಹೊರಿಸುವುದು ತಾರತಮ್ಯ ಮತ್ತು ಅನ್ಯಾಯವಾಗಲಿದೆ ಎಂದು ಪೀಠ ಹೇಳಿದೆ.
ಉತ್ತಮ್ ಚಂದಾನಿ ಎಂಬವರ ಮಾಲೀಕತ್ವದ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ‘ಕಾನ್ಸುಲೇಟ್-1’ ಕಟ್ಟಡದ 4ನೇ ಮಹಡಿಯಲ್ಲಿ ಇಟ್ಟಿಯಂ ಸಿಸ್ಟಮ್ಸ್ ಎಂಬ ಕಂಪನಿ 2001 ರಿಂದ ಬಾಡಿಗೆಗೆ ಇದೆ. ಮಾಲೀಕ ಉತ್ತಮ್ ಚಂದಾನಿ ಮುಂಬೈನ ‘ಭಾರತ್ ಕೋ-ಆಪರೇಟಿವ್ ಬ್ಯಾಂಕ್ನಿಂದ’ ಸಾಲ ಪಡೆದಿದ್ದರು. ಆದರೆ ಸಾಲ ಮರುಪಾವತಿಸಲು ವಿಫಲರಾದಾಗ ಬ್ಯಾಂಕ್ ”ಸರ್ಫೇಸಿ’ ಕಾಯ್ದೆಯಲ್ಲಿ ಕಟ್ಟಡದ ಸ್ವಾಧೀನ ಪ್ರಕ್ರಿಯೆ ಆರಂಭಿಸಿ ಕಂಪನಿ ಕಚೇರಿಯ ತೆರವಿಗೆ ಮುಂದಾಯಿತು. ಅದನ್ನು ಪ್ರಶ್ನಿಸಿ ಕಂಪನಿಯು ಸಾಲ ವಸೂಲಾತಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿತ್ತು. ವಿಚಾರಣೆಗೆ ಪರಿಗಣಿಸಬೇಕಾದರೆ ನಿಯಮಾವಳಿಗಳ ಪ್ರಕಾರ ಪೂರ್ವ ಠೇವಣಿ ಇಡಬೇಕು ಎಂದು ಹೇಳಿ ಆ ಅರ್ಜಿಯನ್ನು ಡಿಆರ್ಟಿಯು ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಚೆನ್ನೈನ ಡಿಆರ್ ಟಿ ಆದೇಶ ರದ್ದುಗೊಳಿಸಿರುವ ಹೈಕೋರ್ಟ್, ಇಟ್ಟಿಯಂ ಸಿಸ್ಟಮ್ಸ್ ಕಂಪನಿಯಿಂದ ಯಾವುದೇ ಪೂರ್ವ ಠೇವಣಿ ಬಯಸದೆ ಮೇಲ್ಮನವಿಯನ್ನು ಮೆರಿಟ್ ಆಧಾರದ ಮೇಲೆ ಆದಷ್ಟು ಬೇಗ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದೆ.


