ಬೆಂಗಳೂರಿನಲ್ಲಿ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿದ್ದ ಪ್ರಕರಣ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂಬಿ.ನಾಗರಾಜ್ ಅವರ ಅಮಾನತು ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ರಜೆ ಪೀಠದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಕೆ. ಮನ್ಮಧ ರಾವ್ ಅವರು, ತನಿಖಾ ಸಮಿತಿಗಳ ವರದಿ ಬರುವ ಮೊದಲೇ ಅಧಿಕಾರಿಯನ್ನು ಅಮಾನತುಗೊಳಿಸಿರುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದ ಕುರಿತು ಲೇ ಎರಡು ಸಮಿತಿಗಳನ್ನು ರಚಿಸಲಾಗಿದೆ. ಆ ಸಮಿತಿಗಳು ವರದಿಯಲ್ಲಿ ಅರ್ಜಿದಾರರ ಕರ್ತವ್ಯಲೋಪವಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ತಪ್ಪು ಸಾಬೀತಾದರೆ ಸರ್ಕಾರಕ್ಕೆ ಸಿಸಿಎ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ಇದೆ ಎಂದು ತಿಳಿಸಿದ್ದಾರೆ.
ಅರ್ಜಿದಾರರ ಪರ ವಕೀಲರು, ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ಪ್ರಕರಣದ ತನಿಖೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪಿಡಬ್ಲ್ಯುಡಿ ತನಿಖಾ ತಂಡ ರಚಿಸಿದೆ.ತಾಂತ್ರಿಕ ಪರಿಶೀಲನೆಗಾಗಿ ಪಿಡಬ್ಲ್ಯುಡಿ ಅಧಿಕಾರಿಗಳ ಮತ್ತೊಂದು ಸಮಿತಿಯನ್ನೂ ರಚಿಸಲಾಗಿದ್ದು, ಅದು ವರದಿ ಸಲ್ಲಿಸಬೇಕಿದೆ. ಸಮಿತಿಗಳಿಂದ ಯಾವುದೇ ಶಿಫಾರಸು ಬರುವ ಮೊದಲೇ ಅಗತ್ಯಪ್ರಾಥಮಿಕ ಸಾಕ್ಷ್ಯಾಧಾರಗಳೂ ಇಲ್ಲದೆ ಅಮಾನತುಗೊಳಿಸಲಾಗಿದೆ ಎಂದು ವಾದಿಸಿದರು.
ಸರ್ಕಾರದ ಪರ ವಕೀಲರು, ಘಟನಾ ಸ್ಥಳದ ಹೊಣೆಗಾರಿಕೆ ಕಾರ್ಯನಿರ್ವಾಹಕ ಎಂಜಿನಿಯರ್, ಈ ಕಾರಣಕ್ಕೆ ಸಿಸಿಎ ನಿಯಮಗಳಡಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ತನಿಖಾ ವರದಿ ಬರುವವರೆಗೆ ಅಮಾನತು ಆದೇಶ ಮುಂದುವರಿಸುವ ಅಗತ್ಯವಿಲ್ಲ ಎಂದ ಕೋರ್ಟ್, ಅಮಾನತು ಆದೇಶವನ್ನು ರದ್ದುಪಡಿಸಿದೆ.


