ಹರ್ಮುಜ್ ಜಲಸಂಧಿ ಪ್ರದೇಶದಲ್ಲಿ ನಾಲ್ಕು ಇರಾನ್ ಡ್ರೋನ್ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದ್ದು, ಪ್ರಮುಖ ಬಂದರು ನಗರವಾದ ಬಂದರ್ ಅಬ್ಬಾಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡ್ರೋನ್ ನಿಯಂತ್ರಣ ಕೇಂದ್ರದ ಮೇಲೂ ದಾಳಿ ನಡೆಸಿದೆ.
ಈ ಮೂಲಕ ಅಮೆರಿಕ-ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮ ವಿಚಾರ ಮತ್ತೆ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ. ಈ ಸಂಘರ್ಷ ಹೊಸ ತಿರುವು ಪಡೆಯುವ ಹಾದಿಯಲ್ಲಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೆ ತೀವ್ರಗೊಳ್ಳುವಂತಾಗಿದೆ.
ಹರ್ಮುಜ್ ಜಲಸಂಧಿ ಸುತ್ತಮುತ್ತ ಅಮೆರಿಕ ಮತ್ತು ಮೈತ್ರಿ ರಾಷ್ಟ್ರಗಳ ಹಡಗುಗಳಿಗೆ ಅಪಾಯ ಉಂಟುಮಾಡುವ ರೀತಿ ಇರಾನ್ ಡ್ರೋನ್ ಚಟುವಟಿಕೆಗಳು ಹೆಚ್ಚಾಗಿದ್ದವು. ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ಕು ‘ಒನ್-ವೇ ಅಟ್ಯಾಕ್ ಡ್ರೋನ್’ಗಳನ್ನು ಗುರಿಯಾಗಿಸಿ ಹೊಡೆದುರುಳಿಸಿವೆ. ಇವು ಆತ್ಮಹತ್ಯಾ ದಾಳಿ ನಡೆಸುವ ಉದ್ದೇಶ ಹೊಂದಿದ್ದ ಡ್ರೋನ್ಗಳಾಗಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.
ಐದನೇ ಡ್ರೋನ್ ಉಡಾವಣೆಗೆ ಸಿದ್ಧವಾಗಿದ್ದ ನಿಯಂತ್ರಣ ಕೇಂದ್ರವನ್ನು ಗುರುತಿಸಿದ ಅಮೆರಿಕ ಪಡೆಗಳು, ಬಂದರ್ ಅಬ್ಬಾಸ್ ಪ್ರದೇಶದಲ್ಲೇ ನಿಖರ ದಾಳಿ ನಡೆಸಿವೆ. ಯುದ್ಧ ವಿರಾಮ ಕಾಪಾಡುವ ಉದ್ದೇಶದಿಂದಲೇ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅಮೆರಿಕ ಪಡೆಗಳು ಅಥವಾ ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳಿಗೆ ಯಾವುದೇ ಅಪಾಯ ಉಂಟಾದರೆ ತಕ್ಷಣ ಪ್ರತಿಕ್ರಿಯಿಸಲಾಗುವುದು ಎಂದು ಅಮೆರಿಕದ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೂಡ ಅಮೆರಿಕ ಸೇನೆ ಈ ಪ್ರದೇಶದಲ್ಲಿ ಇರಾನ್ನ ಕ್ಷಿಪಣಿ ತಾಣಗಳು ಹಾಗೂ ಸಮುದ್ರದಲ್ಲಿ ಮೈನ್ಗಳನ್ನು ಅಳವಡಿಸಲು ಬಳಸಲಾಗುತ್ತಿದ್ದ ದೋಣಿಗಳ ಮೇಲೆ ದಾಳಿ ನಡೆಸಿತ್ತು. ಜಾಗತಿಕ ತೈಲ ಸರಬರಾಜಿಗೆ ಅತ್ಯಂತ ಪ್ರಮುಖವಾಗಿರುವ ಹರ್ಮುಜ್ ಜಲಸಂಧಿ ಪ್ರದೇಶದಲ್ಲಿ ಯಾವುದೇ ಸಂಘರ್ಷ ಉಂಟಾದರೂ ಪರಿಣಾಮ ಜಗತ್ತಿನ ಆರ್ಥಿಕತೆ ಮೇಲಾಗುತ್ತದೆ.


