Menu

ಡೇಟಿಂಗ್ ಆ್ಯಪ್ ಸುಂದರಿ ಆಸೆಗೆ 1.66 ಕೋಟಿ ರೂ. ಕಳೆದುಕೊಂಡ ಟೆಕ್ಕಿ

ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯ ಮಾತಿಗೆ ಮರುಳಾದ ಸಾಫ್ಟ್‌ವೇರ್ ಎಂಜಿನಿಯರ್ 1.66 ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಡೇಟಿಂಗ್ ಆ್ಯಪ್ ವಂಚಕಿ ಟೆಕ್ಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಮೂರು ತಿಂಗಳಲ್ಲಿ ಟೆಕ್ಕಿಯಿಂದ 1.66 ಕೋಟಿ ರೂಪಾಯಿ ವಂಚಿಸಿದ್ದಾಳೆ.  ಸೌರವ್ ದುಬೆಗೆ ಎಂಬ ಟೆಕ್ಕಿ ಫೆಬ್ರವರಿ 15ರಂದು ಟಂಟನ್ ಡೇಟಿಂಗ್ ಆ್ಯಪ್‌ನಲ್ಲಿ ರಿಯಾ ಅಗರ್ವಾಲ್ ಎಂಬ ಯುವತಿಯ ಪರಿಚಯವಾಗಿತ್ತು. ಚಾಟಿಂಗ್ ಮೂಲಕ ಶುರುವಾದ ಪರಿಚಯ ಸ್ನೇಹಕ್ಕೆ ತಿರುಗಿತ್ತು. ನಂತರ ಯುವತಿಯೇ ಸೌರವ್ ಮೊಬೈಲ್ ನಂಬರ್ ಪಡೆದುಕೊಂಡು ನಿರಂತರವಾಗಿ ಆಡಿಯೋ ಮತ್ತು ವೀಡಿಯೊ ಕಾಲ್ ಮಾಡುತ್ತ ವಿಶ್ವಾಸ ಗಳಿಸಿದ್ದಳು. ಸೌರವ್‌ನನ್ನು ಮದುವೆಯಾಗುವುದಾಗಿ ನಂಬಿಸಿದ್ದಳು.

ಸೌರವ್ ಸಂಪೂರ್ಣವಾಗಿ ನಂಬಿದ್ದಾನೆ ಎಂದು ಗೊತ್ತಾದ ಆಕೆ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಕಡಿಮೆ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದು ಎಂಬ ಆಮಿಷ ಒಡ್ಡಿದ್ದಾಳೆ. ನಂಬಿದ ಟೆಕ್ಕಿ ಮೂರು ತಿಂಗಳ ಅವಧಿಯಲ್ಲಿ ಬ್ಯಾಂಕ್ ಖಾತೆಗಳ ಮೂಲಕ 1.66 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.

ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ ನಂತರ ಸೌರವ್‌ಗೆ ವಾಪಸ್ ಸಿಕ್ಕಿದ್ದು 4,250 ರೂಪಾಯಿ. ಅನುಮಾನಗೊಂಡ ಸೌರವ್ ತನಗೆ ಬರಬೇಕಾದ ಲಾಭದ ಹಣ ಮತ್ತು ಅಸಲನ್ನು ವಾಪಸ್ ನೀಡುವಂತೆ ರಿಯಾ ಬಳಿ ಕೇಳಿದ್ದ. ಸೌರವ್ ಹಣಕ್ಕಾಗಿ ಒತ್ತಾಯಿಸಲು ಆರಂಭಿಸಿದ ತಕ್ಷಣ ಆಕೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ. ಮೋಸ ಹೋಗಿರುವುದು ತಿಳಿದ ಬಳಿಕ ಟೆಕ್ಕಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಂಚಕಿ ಹಾಗೂ ಆಕೆಯ ಬ್ಯಾಂಕ್ ಖಾತೆಗಳ ಪರಿಶೀಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *