ಎಬೋಲಾ ವೈರಸ್ ಶಂಕಿತ ಉಗಾಂಡಾದ 28 ವರ್ಷದ ಮಹಿಳೆಯ ತಪಾಸಣಾ ವರದಿಯಲ್ಲಿ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. ಜನರು ಈ ವಿಚಾರದಲ್ಲಿ ಆತಂಕಪಡಬೇಕಿಲ್ಲ ಎಂದು ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.
ಎಬೋಲಾ ವೈರಸ್ ಪೀಡಿತ ಉಗಾಂಡದಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಮಂಗಳವಾರ ರೋಗದ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿತ್ತು.ಅವರನ್ನು ಹೋಟೆಲ್‌ನಿಂದ ಸರ್ಕಾರಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಸ್ಥಳಾಂತರಿಸಿ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ತಪಾಸಣಾ ವರದಿ ಬಂದಿದ್ದು, ಅದು ‘ನೆಗೆಟಿವ್’ ಆಗಿದೆ. ಆಕೆ ಎಬೋಲಾ ವೈರಸ್ ಸೋಂಕಿಗೆ ಒಳಗಾಗಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿರುವುದಾಗಿ ಸಚಿವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯೇ ಸರ್ಕಾರದ ಆದ್ಯತೆಯಾಗಿದೆ. ಆರೋಗ್ಯ ಇಲಾಖೆಯು ಪ್ರತಿಯೊಂದು ಪರಿಸ್ಥಿತಿಯನ್ನೂ ಸೂಕ್ಷ್ಮವಾಗಿ ಗಮನಿಸಿ. ಸಾರ್ವಜನಿಕರ ಹಿತದೃಷ್ಟಿಯಿಂದ ಸವಾಲನ್ನು ಎದುರಿಸಲು ಮತ್ತು ಅಗತ್ಯವಿರುವ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ ಎಂದು ರಾವ್ ಹೇಳಿದ್ದಾರೆ.
ಯಾರೂ ಅನಗತ್ಯ ಆತಂಕ ಪಡಬೇಕಿಲ್ಲ, ವದಂತಿಗಳಿಗೆ ಕಿವಿಗೊಡದೆ ನಿಗದಿತ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಿ.ಸ ಆರೋಗ್ಯದ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ. ಆಫ್ರಿಕನ್ ದೇಶಗಳಲ್ಲಿ ಎಬೋಲಾ ಕಂಡುಬಂದಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಆ ರಾಷ್ಟ್ರಗಳಿಗೆ ಪ್ರಯಾಣಿಸಿದ ವ್ಯಕ್ತಿಗಳು ಹಿಂದಿರುಗಿದ ನಂತರ 21 ದಿನ ಆರೋಗ್ಯ ಮೇಲ್ವಿಚಾರಣೆ ಮತ್ತು ಸ್ವಯಂ ವೀಕ್ಷಣೆಗೆ ಒಳಗಾಗುವಂತೆ ರಾಜ್ಯದ ಆರೋಗ್ಯ ಇಲಾಖೆ ಸೂಚಿಸಿತ್ತು.


