ನಕಲಿಯಾಗಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸೃಷ್ಟಿಸಿ, ಜೈಲು ಅಧಿಕಾರಿಗಳನ್ನೇ ಯಾಮಾರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಕೈದಿಯೊಬ್ಬನ ವಂಚನೆ ಎಂಟು ವರ್ಷದ ಬಳಿಕ ಬಯಲಾಗಿದೆ.
ಈಗ ಪೊಲೀಸರು ಆತನಿಗಾಗಿ ಹುಟುಕಾಟ ನಡೆಸುತ್ತಿದ್ದಾರೆ. ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಎಂಬ ಅಪರಾಧಿ 2001ರಲ್ಲಿ ಸಹಚರರೊಂದಿಗೆ ಸೇರಿ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಅಪಹರಿಸಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ. ವಿಚಾರಣೆ ನಡೆಸಿದ ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ಕೋರ್ಟ್, ಆರೋಪ ಸಾಬೀತಾದ ಬಳಿಕ ಶಂಕರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯದ ಆದೇಶದಂತೆ ಶಂಕರ್ ಆರ್ಮುಗಮ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ಜೈಲು ಸೇರಿದ್ದ ಅಪರಾಧಿಯು ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆ ಆದೇಶ ಬಂದಿದೆ ಎಂದು ನಂಬಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ಸುಪ್ರೀಂ ಕೋರ್ಟ್ ಮುದ್ರೆ, ಸಹಿ ಹಾಗೂ ಅಧಿಕೃತ ಆದೇಶದ ಮಾದರಿಯಲ್ಲೇ ದಾಖಲೆಗಳನ್ನು ಜೈಲು ಅಧಿಕಾರಿಗಳ ಮುಂದೆ ಸಲ್ಲಿಸಿದ್ದ.
2018ರ ನವೆಂಬರ್ 13ರಂದು ಅಪರಾಧಿ ಶಂಕರ್ ಪರವಾಗಿ ಬಂದ ವ್ಯಕ್ತಿಗಳು ಜೈಲು ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಿದ್ದರು. ನ್ಯಾಯಾಲಯ ವಿಧಿಸಿದ್ದ ದಂಡ ಮೊತ್ತದ ರೂಪದಲ್ಲಿ 10 ಸಾವಿರ ರೂಪಾಯಿ ಪಾವತಿಸಿದ್ದರು. ದಾಖಲೆಗಳು ಸುಪ್ರೀಂ ಕೋರ್ಟ್‌ನ ಅಧಿಕೃತ ಆದೇಶವೆಂದು ನಂಬಿದ ಜೈಲು ಅಧಿಕಾರಿಗಳು ಶಂಕರ್ ಆರ್ಮುಗಮ್ ಬಿಡುಗಡೆಗೆ ಅನುಮತಿ ನೀಡಿದ್ದರು.
ಇತ್ತೀಚೆಗೆ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ ಬಂದ ಅನಾಮಧೇಯ ಪತ್ರದಿಂದ ಈ ವಂಚನೆ ಬಯಲಾಗಿದೆ. ಅಪರಾಧಿ ಶಂಕರ್ ನಕಲಿ ಸುಪ್ರೀಂಕೋರ್ಟ್ ಆದೇಶ ಪತ್ರದ ಮೂಲಕ ಜೈಲಿನಿಂದ ಬಿಡುಗಡೆಯಾಗಿದ್ದಾನೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಇಲಾಖೆ ತನಿಖೆ ಆರಂಭಿದಾಗ ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆ ಆದೇಶ ಹೊರಬಂದಿಲ್ಲ ಎಂಬುದು ಸ್ಪಷ್ಟವಾಗಿದೆ.
ಅಪರಾಧಿ ಶಂಕರ್ ಸಲ್ಲಿಸಿದ್ದ ದಾಖಲೆ ಸಂಪೂರ್ಣ ನಕಲಿ ಎಂಬುದು ಗೊತ್ತಾಗುತ್ತಿದ್ದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲೆ ಫೋರ್ಜರಿ, ವಂಚನೆ ಹಾಗೂ ಇತರ ಕಾನೂನುಬದ್ಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಾಗಿದೆ. ತಲೆಮರೆಸಿಕೊಂಡಿರುವ ಶಂಕರ್ ಆರ್ಮುಗಮ್ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ತೀವ್ರಗೊಳಿಸಿದ್ದಾರೆ.


