ಬೆಂಗಳೂರಿನಲ್ಲಿ ಅತಿವೇಗವಾಗಿ ಲ್ಯಾಂಬೋರ್ಗಿನಿ ಕಾರು ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದ ವ್ಯಕ್ತಿಗೆ ಹೈಕೋರ್ಟ್ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸಿ ಅದೇ ಕಾರಲ್ಲಿ ವಾಪಸ್ ಬರುವಂತೆ ಸಮುದಾಯ ಸೇವೆ ಶಿಕ್ಷೆ ವಿಧಿಸಿದೆ.
ಮೈಸೂರು ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಕಾರು ಓಡಿಸಿದ ಆರೋಪದಡಿ ವ್ಯಕ್ತಿಯು ಸಮುದಾಯ ಸೇವೆ ಮಾಡುವುದಾಗಿ ಹೇಳಿದ್ದನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಲ್ಯಾಂಬೊರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸಿ, ಮತ್ತೆ ಲ್ಯಾಂಬೊರ್ಗಿನಿಯಲ್ಲಿ ಬನ್ನಿ ಎಂದು ಹೇಳಿದೆ.
ಜನವರಿ 20 ರಂದು ಚಿರಂತನ್ ಎಂಬಾತ ಕೆಂಗೇರಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದ. ಬಿಎನ್‌ಎಸ್ 281 ಮತ್ತು ಐಎಂವಿ ಕಾಯ್ದೆಯ 177ನೇ ಸೆಕ್ಷನ್ ಅಡಿ ಕೆಂಗೇರಿ ಸಂಚಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ರದ್ದು ಕೋರಿ ಲ್ಯಾಂಬೋರ್ಗಿನಿ ಕಾರು ಚಾಲಕ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಕಕ್ಷಿದಾರನಿಗೆ ಪಶ್ಚಾತ್ತಾಪವಾಗಿದೆ ಎಂದು ತಿಳಿಸಿದ್ದರು. ಬಿಎನ್‌ಎಸ್ ಅಡಿ ಸಮುದಾಯ ಸೇವೆಗೆ ಅವಕಾಶಗಳಿದ್ದು, ಆರೋಪಿಯು ಮಕ್ಕಳಿಗೆ ಸಂಚಾರ ನಿಯಮಗಳ ಕುರಿತು ಪಾಠ ಮಾಡುವುದಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕರು ಲ್ಯಾಂಬೋರ್ಗಿನಿ ಕಾರಿನಲ್ಲಿ ನಿಯಮ ಉಲ್ಲಂಘಿಸಿದ ವ್ಯಕ್ತಿ ಮಕ್ಕಳಿಗೆ ಸಂಚಾರ ನಿಯಮಗಳ ಪಾಠ ಮಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಬದಲಿಗೆ ಆರೋಪಿಯಿಂದ ಗಿಡಗಳನ್ನು ನೆಡಿಸುವುದು ಸೂಕ್ತ ಎಂದು ನ್ಯಾಯಾಲಯಕ್ಕೆ ಸಲಹೆ ನೀಡಿದರು.
ವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠ, ಚಿರಂತನ್‌ಗೆ ಕಸ ಗುಡಿಸುವ ಸಮುದಾಯ ಶಿಕ್ಷೆ ವಿಧಿ, ಶಿಕ್ಷೆಯ ದಿನಾಂಕ ಮತ್ತು ಸಮಯವನ್ನು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗುವುದು ಎಂದು ಹೇಳಿದೆ.


