Menu

ಲವ್‌, ಸೆಕ್ಸ್‌, ಮದುವೆ ಹೆಸರಲ್ಲಿ ವಂಚನೆ: ಇಂಜಿನಿಯರ್‌ ವಿರುದ್ಧ ಶಿಕ್ಷಕಿ ದೂರು

ಲವ್‌, ಸೆಕ್ಸ್‌, ಮದುವೆ ಎಂದು ನಂಬಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಇಂಜಿನಿಯರ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ದೇವದುರ್ಗ ಮೂಲದ ಮಲ್ಲಿಕಾರ್ಜುನ್ ಎಂಬವರು ಮದುವೆಯಾಗುತ್ತೇನೆ ಎಂದು ನಂಬಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿರುವುದಾಗಿ ಅತಿಥಿ ಶಿಕ್ಷಕಿ ಆರೋಪಿಸಿದ್ದಾರೆ.

ಕಾಲೇಜು ದಿನಗಳಿಂದಲೇ ಜೊತೆಯಲ್ಲಿದ್ದ ಮಲ್ಲಿಕಾರ್ಜುನ್ ಮತ್ತು ಮಹಿಳೆ ಪ್ರೀತಿಸುತ್ತಿದ್ದರು. 7-8 ವರ್ಷ ಪ್ರೇಮ ಸಂಬಂಧದಲ್ಲಿದ್ದು, ಮಂತ್ರಾಲಯ, ಆಲಮಟ್ಟಿ ಡ್ಯಾಂ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಓಡಾಡಿದ್ದರು ಎನ್ನಲಾಗಿದೆ. ನಿನ್ನನ್ನೇ ಮದುವೆಯಾಗುತ್ತೇನೆಂದು ನಂಬಿಸಿದ್ದ ಮಲ್ಲಿಕಾರ್ಜುನ್, ಹಲವು ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದಾಗಿಯೂ ಶಿಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆ.

ಬಳಿಕ ಇಬ್ಬರೂ ಬೇರೆ ಬೇರೆ ಜಾತಿಯರು ಎಂಬುದು ಸೇರಿದಂತೆ ನೆಪ ಹೇಳಿದ ಇಂಜಿನಿಯರ್, ಹಲವು ಕುಂಟು ನೆಪಗಳನ್ನು ಹೇಳಿ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಶಿಕ್ಷಕಿ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೋಟೊ, ಆಡಿಯೋ, ವೀಡಿಯೊ ಹಾಗೂ ಮೆಸೇಜ್‌ಗಳೊಂದಿಗೆ ದೂರು ಸಲ್ಲಿಸಿದ್ದಾರೆ. ರಾಯಚೂರು ಮಹಿಳಾ ಠಾಣೆಯಲ್ಲಿ ಮಲ್ಲಿಕಾರ್ಜುನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಹಿಳೆ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆ, 7-8 ವರ್ಷಗಳ ಸಂಬಂಧದ ಬಗ್ಗೆ ವಿವರಗಳ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಯಚೂರು ಎಸ್‌ಪಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *