Menu

ವಂಡರ್‌ಲಾ ಮನರಂಜನೆಗೆ ‘ಗರುಡ ಗ್ಲೈಡ್’ ರೈಡ್ ಸೇರ್ಪಡೆ

ರಾಮನಗರದಲ್ಲಿರುವ  ಮನರಂಜನೆ ತಾಣ ವಂಡರ್‌ಲಾದಲ್ಲಿ ಹೊಸತಾಗಿ ‘ಗರುಡ ಗ್ಲೈಡ್’ ಅತ್ಯಾಧುನಿಕ ರೋಲರ್ ಕೋಸ್ಟರ್ ಸೇರ್ಪಡೆಯಾಗಿದೆ. ಮಹಿಳಾ ಆರ್‌ಸಿಬಿ ತಂಡ ಶ್ರೇಯಾಂಕ ಪಾಟೀಲ್‌ ಹಾಗೂ ಖ್ಯಾತ ಯೂಟ್ಯೂಬರ್ ಡಾ.ಬ್ರೋ ಗಗನ್  ಚಾಲನೆ ನೀಡಿದ್ದಾರೆ.

ಯುವಜನರು ಮತ್ತು ಮಕ್ಕಳ ನೆಚ್ಚಿನ ಮನರಂಜನಾ ತಾಣವಾದ ವಂಡರ್‌ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಹೊಸ ಬಗೆಯ ಅನುಭವ ನೀಡುವ ನೂತನ ಗೇಮ್ ಗರುಡ ಗ್ಲೈಡ್ ಆರಂಭಿಸಲಾಯಿತು. ಪ್ರತಿ ಬೇಸಿಗೆಯಲ್ಲಿ ಒಂದಿಲ್ಲೊಂದು ಹೊಸ ರೀತಿಯ ರೈಡ್ ಪರಿಚಯಿಸುವ ವಂಡರ್‌ಲಾ ಈ ಬಾರಿ ರಂಜನೆಯ ರೋಚಕ ಅನುಭವ ನೀಡುವ ಅತ್ಯಾಧುನಿಕ ರೋಲರ್ ಕೋಸ್ಟರ್ ಅನ್ನು ಲೋಕಾರ್ಪಣೆಗೊಳಿಸಿದೆ.

ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಎಂಡಿ ಅರುಣ್ ಕೆ. ಚಿತ್ತಿಲಪ್ಪಿಲ್ಲಿ ಮಾತನಾಡಿ, ರೈಡ್ ಮಾಡುವವರು ರೋಲ್ ಓವರ್, ವರ್ಟಿಕಲ್ ಲೂಪ್, ಸೈಡ್ ವೈಂಡರ್ ಮತ್ತು ಡಬಲ್ ಇನ್ ಲೈನ್ ಟ್ವಿಸ್ಟ್ ಗಳನ್ನು ಸತತವಾಗಿ ಅನುಭವಿಸುತ್ತಾರೆ. ಯಾವುದೇ ವಿರಾಮವಿಲ್ಲದೆ ಸಂಪೂರ್ಣ ರೋಮಾಂಚನ ನೀಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದರು.

ಇಲ್ಲಿ ಸವಾರರು ಹಳಿಯ ಕೆಳಗೆ ಕುಳಿತುಕೊಳ್ಳುತ್ತಾರೆ ಮತ್ತು ಅವರ ಕಾಲುಗಳು ಗಾಳಿಯಲ್ಲಿ ತೂಗಾಡುತ್ತಿರುತ್ತವೆ. ಇದು ಗಾಳಿಯಲ್ಲಿ ಹಾರುವ ರೋಚಕ ಅನುಭವವನ್ನು ನೀಡುವುದಲ್ಲದೆ, ಪ್ರತಿಯೊಂದು ತಿರುವು ಮತ್ತು ಪಲ್ಟಿಗಳಲ್ಲಿ ಮತ್ತಷ್ಟು ತೀವ್ರ ಅನುಭವ ಒದಗಿಸುತ್ತದೆ. ಇದರ ವಿಶೇಷ ವಿನ್ಯಾಸವು ವೇಗ ಮತ್ತು ಎತ್ತರಕ್ಕೆ ಸಾಗುವ ಭಾವ ಹೆಚ್ಚಿಸುವಂತೆ ಮೂಡಿಬಂದಿದೆ ಎಂದು ಹೇಳಿದರು.

662 ಮೀಟರ್ ಗಳಷ್ಟು ಉದ್ದವಿರುವ ಸ್ಟೀಲ್ ಹಳಿಯ ಮೇಲೆ ಗಂಟೆಗೆ 80 ಕಿಮೀ ವೇಗದಲ್ಲಿ ಸಾಗುತ್ತಾ, 31 ಮೀಟರ್ ಎತ್ತರಕ್ಕೆ ಏರಬಹುದು. ಈ 130 ಸೆಕೆಂಡ್ ಗಳ ಪ್ರಯಾಣವು ಅದ್ಭುತ ರೋಚಕತೆಯಿಂದ ಕೂಡಿರಲಿದೆ. ಇದನ್ನು ನೆದರ್ ಲ್ಯಾಂಡ್ಸ್ ನ ‘ವೆಕೋಮಾ’ ನಿರ್ಮಿಸಿದೆ. ಯುರೋಪ್ ನಿಂದ ತರಿಸಲಾದ ಘಟಕಗಳನ್ನು ಯುರೋಪಿಯನ್ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಜೋಡಿಸಲಾಗಿದ್ದು, ವಿಶ್ವದರ್ಜೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿದೆ ಎಂದು ತಿಳಿಸಿದರು.

ಈ ಗೇಮ್ ನಲ್ಲಿ ಎರಡು ರೈಲುಗಳು ಏಕಕಾಲದಲ್ಲಿ ಚಲಿಸುತ್ತವೆ. ಪ್ರತಿಯೊಂದೂ 14 ಸವಾರರನ್ನು (7 ಸಾಲುಗಳು 2 ಸೀಟುಗಳು) ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಗಂಟೆಗೆ ಸುಮಾರು 252 ಅತಿಥಿಗಳು ಈ ಸವಾರಿಯ ಅನುಭವ ಪಡೆಯಲು ಅನುವು ಮಾಡಿಕೊಡುತ್ತದೆ. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಗುಣಮಟ್ಟದ ಮಾನದಂಡಗಳನ್ನು ಎತ್ತರಿಸುವುದು ನಮ್ಮ ಗುರಿಯಾಗಿದೆ. ನಮ್ಮ ಹಲವು ರೋಚಕ ರೈಡ್ ಗಳ ಸಾಲಿಗೆ ಗರುಡ ಗ್ಲೈಡ್ ಸೇರ್ಪಡೆಯಾಗುವುದರೊಂದಿಗೆ, ಒಂದೇ ಪಾರ್ಕ್ ನಲ್ಲಿ ಎರಡು ಬೃಹತ್ ಇನ್ವರ್ಷನ್ ಕೋಸ್ಟರ್‌ಗಳನ್ನು ನೀಡುತ್ತಿರುವ ದೇಶದ ಮೊದಲ ಅಮ್ಯೂಸ್ ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ ಎಂದು ಹೇಳಿದರು.

ಈ ರೈಡ್ ಕೇವಲ ಇನ್ವರ್ಷನ್ ಗಳು (ತಲೆಕೆಳಗಾಗುವ ತಿರುವುಗಳು) ಮತ್ತು ವೇಗಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಎಂಜಿನಿಯರಿಂಗ್ ಕಲಾತ್ಮಕತೆಯೂ ಹೌದು. ಅತ್ಯುನ್ನತ ಜಾಗತಿಕ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದರ ಜೊತೆಗೆ ಸತತವಾದ ರೋಮಾಂಚನವನ್ನು ನೀಡುವ ರೈಡ್ ಇದಾಗಿದೆ. ನಮ್ಮ ಆಂತರಿಕ ಎಂಜಿನಿಯರಿಂಗ್ ತಂಡವು ಇದರ ಅಳವಡಿಕೆ ಮತ್ತು ಸಂಯೋಜನೆಯ ಪ್ರತಿಯೊಂದು ಹಂತದಲ್ಲೂ ಅತ್ಯಂತ ನಿಖರವಾಗಿ ಕೆಲಸ ಮಾಡಿದೆ. ಎಂದಿನಂತೆ, ವಿನ್ಯಾಸದಿಂದ ಹಿಡಿದು ದೈನಂದಿನ ಕಾರ್ಯಾಚರಣೆಯವರೆಗೆ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ವೆಕೋಮಾ ಸಂಸ್ಥೆಯ ಈ ಅದ್ಭುತ ಸೃಷ್ಟಿಯನ್ನು ಬೆಂಗಳೂರಿಗೆ ತಂದಿರುವುದಕ್ಕೆ ನಮಗೆ ಹೆಮ್ಮೆಯಿದೆ ಮತ್ತು ನಮ್ಮ ಅತಿಥಿಗಳು ‘ಗರುಡ ಗ್ಲೈಡ್’ ನ ವೇಗ ಮತ್ತು ಸಂಭ್ರಮವನ್ನು ಅನುಭವಿಸುವುದನ್ನು ನೋಡಲು ನಾವು ಕಾತರರಾಗಿದ್ದೇವೆ ಎಂದರು. ಸಿಇಒ ಧೀರನ್ ಚೌಧರಿ ಹಾಗೂ ಬೆಂಗಳೂರು ಪಾರ್ಕ್ ಮುಖ್ಯಸ್ಥರು ರುದ್ರೇಶ್ ಹೆಚ್.ಎಸ್ ಉಪಸ್ಥಿತರಿದ್ದರು

Related Posts

Leave a Reply

Your email address will not be published. Required fields are marked *