ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟವಾಗಿ ಎರಡು ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವುದು ತಿಳಿದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ನಡೆದಿದೆ.
ತನುಶ್ರೀ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ, ಆಕೆ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಮೂರು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು.ಆಕೆ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಹಾಲ್ ಟಿಕೆಟ್ ಹಾಸಿಗೆಯ ಮೇಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಫಲಿತಾಂಶದ ಬಳಿಕ ಉಂಟಾದ ಮಾನಸಿಕ ಒತ್ತಡದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ವಿದ್ಯಾರ್ಥಿನಿ ಫಲಿತಾಂಶ ಕುರಿತು ತನ್ನ ಸ್ನೇಹಿತರೊಂದಿಗೆ ಮಾತನಾಡಿದ್ದಾಳೆ ಎಂಬ ಮಾಹಿತಿ ಇದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೇಸ್‌ನಲ್ಲಿ ಯುವತಿಯ ತಾಯಿ ಮೇಲೆ ಅನುಮಾನ ವ್ಯಕ್ತವಾಗಿತ್ತು. ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದರೂ ರಾತ್ರಿ 10 ಗಂಟೆಯವರೆಗೂ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಪೊಲೀಸರಿಗೆ ತಿಳಿಸದೆಯೇ 4-5 ಯುವಕರ ಸಹಾಯದಿಂದ ತಾಯಿಯೇ ಮೃತದೇಹವನ್ನು ಕೆಳಕ್ಕೆ ಇಳಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದರು. ತಾಯಿಯೇ ಮಗಳನ್ನು ಕೊಂದು ನೇಣು ಹಾಕಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದರು.


