ಈ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದು ಯಾರು ಎಂಬುದಲ್ಲ. ಇದು ಯಾರಿಗೆ ಬೇಕಿತ್ತು ಎಂಬುದೂ ಮುಖ್ಯ . ಒಟ್ಟಿನಲ್ಲಿ ಇದರಿಂದ ಜಾಗತಿಕ ಮಟ್ಟದಲ್ಲಿ ಯಾರು ಯಾವ ಕಡೆ ? ಅಗ್ರ ರಾಜ್ಯಗಳ ಒಳನೀತಿ ಮತ್ತು ಅಂತರಾಳವೇನು ? ಇರಾನ್ ಬಳಿ ಇರುವ ಶಸ್ತ್ರಾಸ್ತ್ರಗಳ ಶಕ್ತಿ ಎಷ್ಟು ? ಕದನ ವಿರಾಮಕ್ಕೆ ಕೊನೆಗೆ ಫಲಿಸಿದ್ದು ಯಾವ ದೇಶದ ರಾಜತಾಂತ್ರಿಕತೆ ? ಈ ಯುದ್ದ ವಿರಾಮಕ್ಕೆ ವಿಶ್ವಸಂಸ್ಥೆ ತುಸುವಾದರೂ ನೆರವಾಯಿತೇ ಎಂಬ ಹಲವು ಹತ್ತು ಗಂಭೀರ ಪ್ರಶ್ನೆಗಳೀಗ ಜಾಗತಿಕ ಮಟ್ಟದ ಗಂಭೀರ ಚರ್ಚೆಗೆ ಗ್ರಾಸವಾಗಿದೆ.
ಅಂತೂ ನಲವತ್ತು ದಿನಗಳ ಭೀಕರ ಸಮರಕ್ಕೆ ಈಗ ತೆರೆ ! ಇರಾನ್- ಇಸ್ರೇಲ್ ನಡುವಣ ತಲೆದೋರಿದ ಈ ಯುದ್ಧದಿಂದ ಎರಡೂ ದೇಶಗಳು ಎರಡು ವಾರಗಳ ಕಾಲ ದೂರ ಸರಿಯಲು ನಿರ್ಧರಿಸಿದೆ. ಅರ್ಥಾತ್ , ಇದು ಇವರಿಬ್ಬರ ನಡುವಣ ತೀರ್ಮಾನವಲ್ಲ. ಪ್ರಮುಖವಾಗಿ ಇಸ್ರೇಲ್ ದೇಶವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡ ಅಮೆರಿಕದ ತೀರ್ಮಾನವಿದು.
ಈ ಯುದ್ಧದಲ್ಲಿ ಸೋತಿದ್ದು ಯಾರು ? ಗೆದ್ದಿದ್ದು ಯಾರು ಎಂಬುದಲ್ಲ. ಇದು ಯಾರಿಗೆ ಬೇಕಿತ್ತು ಎಂಬುದು ಪ್ರಶ್ನೆ . ಒಟ್ಟಿನಲ್ಲಿ ಇದರಿಂದ ಜಾಗತಿಕ ಮಟ್ಟದಲ್ಲಿ ಯಾವ ದೇಶ ಯಾರ ಕಡೆ ಇದೆ ? ಅಗ್ರ ರಾಜ್ಯಗಳ ಒಳನೀತಿ ಮತ್ತು ಅಂತರಾಳವೇನು ? ಇರಾನ್ ಬಳಿ ಇರುವ ಶಸ್ತ್ರಾಸ್ತ್ರಗಳ ಶಕ್ತಿ ಎಷ್ಟು ? ಕದನ ವಿರಾಮಕ್ಕೆ ಕೊನೆಗೆ ಫಲಿಸಿದ್ದು ಯಾವ ದೇಶದ ರಾಜತಾಂತ್ರಿಕತೆ ? ಈ ಯುದ್ದ ವಿರಾಮಕ್ಕೆ ವಿಶ್ವಸಂಸ್ಥೆ ತುಸುವಾದರೂ ನೆರವಾಯಿತೇ ಎಂಬ ಹಲವು ಹತ್ತು ಗಂಭೀರ ಸಂಗತಿಗಳನ್ನು ಈಗ ಜಾಗತಿಕ ಮಟ್ಟದಲ್ಲಿ ಹುಟ್ಟು ಹಾಕಿದೆ. ಯುದ್ದ ಆರಂಭದಿಂದಲೂ ಇರಾನ್ ವಿರುದ್ದ ಅಬ್ಬರಿಸಿದ್ದು ಅಮೆರಿಕ. ಅಧಿಕ ಪರಮಾಣು ಅಸ್ತ್ರಗಳ ಸಂಗ್ರಹದ ಮೇರೆಗೆ ಇರಾನ್ ಮೇಲೆ ಅಮೆರಿಕ ಮುಗಿಬಿದ್ದಿದ್ದು ಗಮನಾರ್ಹ. ಯುದ್ಧಾರಂಭದಲ್ಲಿ ತಾನೇ ಮಹಾ ಶಕ್ತಿವಂತ ಎಂದು ಬೊಬ್ಬಿರಿದ ಡೊನಾಲ್ಡ್ ಟ್ರಂಪ್ ಅವರ ತೀರ್ಮಾನ ಮತ್ತು ವೈಖರಿಗೆ ಇಂದು ನಾನಾ ದೇಶಗಳು ಆಕ್ಷೇಪಿಸಿವೆ. ಇಲ್ಲಿಯವರೆಗೆ ಯಾರು ಅಮೆರಿಕವನ್ನು ಬೆಂಬಲಿಸುತ್ತ ಬಂದ ಬ್ರಿಟನ್, ಫ್ರಾನ್ಸ್, ಆಸ್ಟ್ರೇಲಿಯಾ ಮೊದಲಾದ ದೇಶಗಳು ಟ್ರಂಪ್ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದು ಗಮನಾರ್ಹ ಮಿಗಿಲಾಗಿ ನ್ಯಾಟೋ ಬಳಕೆಗೆ ನ್ಯಾಟೋ ಕೂಟದ ದೇಶಗಳು ಸುತರಾಂ ಒಪ್ಪಲಿಲ್ಲ. ಅಲ್ಲದೆ ಕೊಲ್ಲಿ ದೇಶಗಳ ಮೂಲಕ ಇರಾನ್ ಮೇಲೆ ಯುದ್ಧವನ್ನು ಮುಂದುವರಿಸಲು ಬ್ರಿಟನ್, ಫ್ರಾನ್ಸ್ ಸುತರಾಂ ಒಪ್ಪಲಿಲ್ಲ. ಇವೆಲ್ಲವೂ ಅಮೆರಿಕದ ಅಧ್ಯಕ್ಷರನ್ನು ಎದೆಗುಂದಿಸಿದ ಸಂಗತಿಗಳೆಂದರೆ ಅತಿಶಯವಲ್ಲ.
ಆಯತೊಲ್ಲ ಖಮೇನಿ ಮತ್ತು ಇವರ ಆಪ್ತಬಳಗವನ್ನು ಕೊಂದಿದ್ದೇ ಅಮೆರಿಕ ಮತ್ತು ಇಸ್ರೇಲ್ ಶಕ್ತಿಯಲ್ಲ. ಇಸ್ರೇಲ್ ಮತ್ತು ಇರಾನ್ ನಡುವೆ ರಾಜಕೀಯ, ಐತಿಹಾಸಿಕ ವಿಭೇಧವಿರುವುದು ನಿಜ. ಆದರೆ ಇದನ್ನು ಬೆಟ್ಟದಷ್ಟು ಮಾಡಿ ಲಾಭ ಪಡೆಯಲು ಯತ್ನಿಸಿದ್ದು ಅಮೆರಿಕ ಎಂಬುದರಲ್ಲಿ ಎರಡು ಮಾತಿಲ್ಲ. ಈ ವಿದ್ಯಮಾನದಿಂದ ನಿಜಕ್ಕೂ ಅಪಾರ ನಷ್ಟಕ್ಕೆ ಒಳಗಾಗಿದ್ದು ಅರಬ್‌ದೇಶಗಳು ! ಇರಾನ್‌ಗೆ ಮೂಲತಃ ಕೊಲ್ಲಿ ದೇಶಗಳ ಮೇಲೆ ಯಾವ ದ್ವೇಷವೂ ಇಲ್ಲ. ಆದರೆ ಅಮೆರಿಕದ ಮೇಲಿನ ಸಿಟ್ಟು ಮತ್ತು ಆಕ್ರೋಶಕ್ಕೆ ಸರ್ವ ರೀತಿಯಲ್ಲಿ ಸಿಲುಕಿ ನಜ್ಜು ಗುಜ್ಜಾಗಿದ್ದು ಈ ದೇಶಗಳು. ಈಗಿದು ಕೇವಲ ಎರಡು ವಾರಗಳ ಕಾಲದ ಕದನ ವಿರಾಮವಾದರೆ ಫಲವಿಲ್ಲ. ಖಾಯಂ ಆಗಿ ಸಮಸ್ಯೆ ಯನ್ನು ಬಗೆಹರಿಸುವ ದಿಶೆಯಲ್ಲಿಂದು ಮಾತುಕತೆ ನಡೆಯಬೇಕಿದೆ. ಶಾಂತಿ ಮತ್ತು ಸುಭಿಕ್ಷೆ ಎಂಬುದು ಕೇವಲ ಘೋಷಣೆಯಾದರೆ ಸುಖವಿಲ್ಲ. ಮೊದಲು ಈ ಘೋಷಣೆಯನ್ನು ಕಟ್ಟು ನಿಟ್ಟಾಗಿ ಆಚರಣೆಗೆ ತರಬೇಕಿರುವುದು ಅಗ್ರ ದೇಶಗಳೇ ವಿನಹ ಬೇರೆ ದೇಶಗಳಲ್ಲ .


