Menu

ಕದನ ವಿರಾಮ ಮುರಿಯುವವರೆಗೆ ಮಾತ್ರ ಇರಾನ್‌ ಸುರಕ್ಷಿತ: ಟ್ರಂಪ್‌ ವಾರ್ನ್‌

ಕದನ ವಿರಾಮ ಮುರಿಯುವ ತನಕ ಮಾತ್ರ ಇರಾನ್‍ನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸುರಕ್ಷಿತವಾಗಿ ಇರಲಿವೆ. ಒಪ್ಪಂದ ಮುರಿದ ಕ್ಷಣದಿಂದಲೇ ದೊಡ್ಡ ದಾಳಿ ನಡೆಯಲಿದೆ. ಆ ದಾಳಿ ಹಿಂದೆಂದಿಗಿಂತಲೂ ಭೀಕರವಾಗಿ ಇರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಹರ್ಮುಜ್ ಜಲಸಂಧಿ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಇರಲಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂದು ಟ್ರಂಪ್ ಹೇಳಿದ್ದು, ಒಪ್ಪಂದವನ್ನು ಅಂತಿಮಗೊಳಿಸುವವರೆಗೆ ಇರಾನ್ ಮತ್ತು ಸುತ್ತಮುತ್ತ ಅಮೆರಿಕದ ಪಡೆಗಳನ್ನು ನಿಯೋಜಿಸಲಾಗುವುದು. ನಮ್ಮ ಸೇನೆ ಸಜ್ಜುಗೊಂಡಿದ್ದು, ವಿಶ್ರಾಂತಿ ಪಡೆಯುತ್ತಿದೆ. ಮುಂದಿನ ವಿಜಯಕ್ಕಾಗಿ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.

ಏ.7 ರಂದು ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧಕ್ಕೆ 14 ದಿನಗಳ ಕದನ ವಿರಾಮ ಘೋಷಣೆಯಾಗಿತ್ತು. ಕದನ ವಿರಾಮ ಘೋಷಣೆಗೂ ಮುನ್ನ ಇರಾನ್‌ 10 ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಅಮೆರಿಕ ಯಾವ ರೀತಿ ಸ್ವೀಕರಿಸುತ್ತದೆ ಎನ್ನುವುದರ ಮೇಲೆ ಕದನ ವಿರಾಮ ಭವಿಷ್ಯ ನಿರ್ಧಾರವಾಗಲಿದೆ.

ಅಮೆರಿಕ- ಇರಾನ್‌ ಕದನ ವಿರಾಮದ ಮಧ್ಯೆಯೇ ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿಗಳನ್ನು ನಡೆಸಿದ್ದು 100 ಜನರು ಮೃತಪಟ್ಟಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯನ್ನು ಖಂಡಿಸಿರುವ ಇರಾನ್‌ ಹರ್ಮುಜ್‌ ಜಲಸಂಧಿಯನ್ನು ಮುಚ್ಚಿದೆ.

ಲೆಬನಾನ್‌ ಮೇಲಿನ ದಾಳಿ ಮೂಲಕ ಇಸ್ರೇಲ್ ಕದನವಿರಾಮ ಉಲ್ಲಂಘನೆ ಮಾಡಿದೆ ಎಂದು ಇರಾನ್‌ ಹೇಳಿದ್ದು, ಈ ಕದನ ವಿರಾಮದಲ್ಲಿ ಲೆಬನಾನ್ ಸೇರ್ಪಡೆಯಾಗಿಲ್ಲ ಎಂದು ಅಮೆರಿಕ ಹೇಳಿತ್ತು. ಇರಾನ್ ಲೆಬನಾನ್ ಮೇಲಿನ ದಾಳಿಯನ್ನು ಖಂಡಿಸಿ ಮತ್ತೆ ಜಲಸಂಧಿಯನ್ನು ಮುಚ್ಚಿದೆ. ಈ ಎಲ್ಲ ಬೆಳವಣಿಗೆ ಮಧ್ಯೆ ಕದನ ವಿರಾಮ ಒಪ್ಪಂದ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ.

Related Posts

Leave a Reply

Your email address will not be published. Required fields are marked *