ಅನೈತಿಕ ಸಂಬಂಧಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರೇಯಸಿಯ ಪತಿಯನ್ನು ಪ್ರಿಯಕರ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುನೀಲ್ ನಾಯಕ್ ಕೊಲೆಯಾದ ವ್ಯಕ್ತಿ. ಸುನೀಲ್ ನಾಯಕನ ಪತ್ನಿಯ ಪ್ರಿಯಕರ ಬಸುದೇವ್ ಮಲ್ಲಿಕ್ ಕೊಲೆ ಮಾಡಿದಾತ.
ಬಸುದೇವ್ ಮಲ್ಲಿಕ್ ಸುನೀಲ್ ನಾಯಕ್ ಪತ್ನಿಯೊಂದಿಗೆ ಸಲುಗೆ ಹೊಂದಿದ್ದ ವಿಚಾರ ತಿಳಿದು ಸುನೀಲ್ ನಾಯಕ್ ಗಲಾಟೆ ಮಾಡಿದ್ದ. ಕೋಪಗೊಂಡ ಆರೋಪಿ ಮದ್ಯಪಾನ ಮಾಡುವ ನೆಪದಲ್ಲಿ ಕರೆದು ಕಂಠಪೂರ್ತಿ ಕುಡಿಸಿ ಸುನೀಲ್ ನಾಯಕ್ನನ್ನು ಕೊಲೆ ಮಾಡಿದ್ದ. ಕೊಲೆ ಬಳಿಕ ಮೃತದೇಹವನ್ನು ಮೂಟೆಯಲ್ಲಿ ಹಾಕಿ ಬೊಮ್ಮಸಂದ್ರದ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ. ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಬಸುದೇವ್ ಮಲ್ಲಿಕ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಕಾಣೆಯಾಗಿದ್ದ ಗುತ್ತಿಗೆದಾರ ಶವವಾಗಿ ಪತ್ತೆ
ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಅನುಮಾನಾಸ್ಪದವಾಗಿ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದ ಪವನ್ (27) ಮೃತಪಟ್ಟಿರುವ ಗುತ್ತಿಗೆದಾರ. ಪವನ್ ಎಲೆಕ್ಟ್ರಿಕ್ ಕಾಮಗಾರಿಯನ್ನು ನಡೆಸುತ್ತಿದ್ದ. ಏ.2ರಂದು ಮನೆಯಿಂದ ಕೆಲಸದ ಸ್ಥಳಕ್ಕೆ ಹೋಗುತ್ತೇನೆ ಎಂದು ತೆರಳಿದ್ದ ಆತ ಮನೆಗೆ ವಾಪಸ್ ಬಂದಿರಲಿಲ್ಲ.
ಫೋನ್ ಸ್ಪೀಚ್ ಆಫ್ ಆಗಿದ್ದು, ಸಾಮಾಜಿಕ ಜಾಲತಾಣದ ಖಾತೆಗಳು ಡಿ ಆಕ್ಟೀವ್ ಆಗಿದ್ದವು. ಮನೆಯವರು ಹಾಗೂ ಸ್ನೇಹಿತರು ಹುಡುಕಾಟ ನಡೆಸಿದ್ದರು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿತ್ತು. ಸೋಮವಾರ ಪವನ್ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಸಾವಿನ ಬಗ್ಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದು ಕೊಲೆ ಮಾಡಿ ನದಿಗೆ ಎಸೆಯಲಾಗಿದೆ ಎಂದು ಆರೋಪಿಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


