ಮಕ್ಕಳನ್ನು ಇರಾನ್ನಲ್ಲಿ ಬಿಟ್ಟು ದೀರ್ಘ ರಜೆಯಲ್ಲಿ ಕೊಡಗಿಗೆ ಬಂದಿದ್ದ ದಂಪತಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನ ಸಂಚಾರ ರದ್ದುಗೊಂಡ ಕಾರಣ ಇರಾನ್ಗೆ ಹೋಗಲಾಗದೆ ಪರಿತಪಿಸುತ್ತಿದ್ದರೆ ಮತ್ತೊಂದೆಡೆ ಅವರಿಗೆ ಇರಾನ್ನಲ್ಲಿರುವ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದಂಪತಿಯ ಪಾಸ್ಪೋರ್ಟ್ ಅವಧಿ ಮುಕ್ತಾಗೊಳ್ಳುವ ಹಂತದಲ್ಲಿದ್ದು, ಮತ್ತೆ ಇರಾನ್ಗೆ ಹೋಗಲು ಸಾಧ್ಯವಾಗುವುದೋ ಇಲ್ಲವೋ ಎಂಬ ಭಯದಲ್ಲಿದ್ದಾರೆ.
ಇರಾನ್ ಪ್ರಜೆಯನ್ನು ಮದುವೆಯಾಗಿರುವ ಕೊಡಗು ಮೂಲದ ಮಹಿಳೆ ದೀರ್ಘ ರಜೆಯ ಮೇಲೆ ಮೂರ್ನಾಡು ಸಮೀಪದ ಕಾಂತೂರಿಗೆ ಬಂದಿದ್ದರು. ಕೊಡಗಿನ ನವೀನ್ 40 ವರ್ಷದ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಇರಾನ್ನ ನಾದರ್ ಪರಿಚಯವಾಗಿತ್ತು. ಬಳಿಕ ಪ್ರೀತಿಸಿ ವಿವಾಹವಾದರು. ನಂತರ ದಂಪತಿ ಇರಾನ್ನ ಬೋಜ್ನೂರ್ ಪ್ರದೇಶದಲ್ಲಿ ನೆಲೆಸಿದ್ದರು .ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಸಿವಿಲ್ ಇಂಜಿನಿಯರ್ ಆಗಿದ್ದು, ಮತ್ತೊಬ್ಬರು ಆರ್ಕಿಟೆಕ್ಟ್ (ವಾಸ್ತುಶಿಲ್ಪಿ) ಆಗಿದ್ದಾರೆ.
ಈ ಕುಟುಂಬವು ಇರಾನಿನಲ್ಲಿ ದಾಳಿಂಬೆ, ಗ್ರೇಪ್, ಆಪಲ್, ಬ್ಲೂಬೆರಿ, ಬಾದಾಮಿ, ಏಪ್ರಿಕೋಟ್, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಫಾರ್ಮ್ಗಳನ್ನ ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುವ ದಂಪತಿ, ಮಾರ್ಚ್ನಲ್ಲಿ ಇರಾನ್ಗೆ ತೆರಳುತ್ತಿದ್ದರು. ಈ ಬಾರಿಯೂ ಡಿಸೆಂಬರ್ನಲ್ಲಿ ಕೊಡಗಿಗೆ ಬಂದಿದ್ದು, ಮಾರ್ಚ್ 16 ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್ನ ಬೋಜ್ನೂರ್ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಅಮೆರಿಕ–ಇರಾನ್ ಯುದ್ಧದ ಕಾರಣ ವಿಮಾನ ರದ್ದಾಯಿತು. ಏಪ್ರಿಲ್ 15 ರಂದು ಮತ್ತೊಮ್ಮೆ ಬುಕ್ ಮಾಡಿದರೂ ಆ ವಿಮಾನ ಸಂಚಾರವೂ ರದ್ದುಗೊಂಡಿದೆ.
ದಂಪತಿಯ ಪಾಸ್ಪೋರ್ಟ್ ಅವಧಿ ಮುಂದಿನ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್ನಲ್ಲಿ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿವೆ. ಮಕ್ಕಳನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಯುದ್ಧ ಪರಿಸ್ಥಿತಿಯಿಂದಾಗಿ ಬದುಕು ಅತಂತ್ರವಾಗುತ್ತಿದ್ದು, ಬೇಗ ಯುದ್ಧ ಕೊನೆಯಾಗಲಿ ಎಂದು ಹಂಬಲಿಸುತ್ತಿದ್ದಾರೆ.


