ಲೋಕಾಯುಕ್ತ ಸಂಸ್ಥೆ ಹಾಗೂ ಉಪ ಲೋಕಾಯುಕ್ತರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ ಆರೋಪದಡಿ ಇಬ್ಬರು ವೈದ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ವಿಜಯಪುರ ಆದರ್ಶ ನಗರ ನಿವಾಸಿ ಡಾ. ಅಮಿತ್ ಪುಂಡಲೀಕ್ ಕಾಳೆ ಹಾಗೂ ಬೀದರ್ ಔರಾದ್ ತಾಲೂಕಿನ ಕೌಠಾ (ಬಿ) ಗ್ರಾಮದ ಡಾ. ಸಿದ್ದು ಆರೋಪಿಗಳು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವೈರಲ್ ವೀಡಿಯೊಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದರು ಎನ್ನಲಾಗಿದೆ.
ಜೂನ್ 19 ಮತ್ತು 20ರಂದು ಬೀದರ್ ಜಿಲ್ಲಾ ಪ್ರವಾಸದ ವೇಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಪ್ರಯೋಗಾಲಯ ತಂತ್ರಜ್ಞ ಸಂಜುಕುಮಾರ್ ಬಳಿ 90 ಸಾವಿರ ನಗದು, 8.61 ಲಕ್ಷ ಮೌಲ್ಯದ ಚೆಕ್‌ಗಳ ದಾಖಲೆಗಳು, 10 ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು.
ಏಳು ಡೆಬಿಟ್ ಕಾರ್ಡ್‌ಗಳು ಸಂಜುಕುಮಾರ್ ಹೆಸರಿನಲ್ಲಿದ್ದು, ಉಳಿದವು ಅವರ ಪತ್ನಿಯ ಹೆಸರಿನಲ್ಲಿದ್ದವು. ಈ ಬಗ್ಗೆ ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿಸಿದ್ದರು ಎಂಬುದು ಸುದ್ದಿಯಾಗಿತ್ತು.
ಆಸ್ಪತ್ರೆಯ ವಾರ್ಡ್‌ಗಳಲ್ಲಿ ರೋಗಿಗಳಿಗೆ ನೀಡಲಾಗುತ್ತಿದ್ದ ದಿಂಬು, ಹಾಸಿಗೆ ಹಾಗೂ ಬೆಡ್‌ಶೀಟ್‌ಗಳು ಹರಿದು ಹೋಗಿದ್ದವು. ಆಸ್ಪತ್ರೆಗೆ ಪ್ರತಿವರ್ಷ ಹಾಸಿಗೆ, ದಿಂಬು, ಬೆಡ್‌ಶೀಟ್ ಹಾಗೂ ಇತರ ಅಗತ್ಯ ವಸ್ತುಗಳ ಖರೀದಿಗೆ ರೂ.14.40 ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದರೂ, 2023ರಿಂದ ಯಾವುದೇ ಖರೀದಿ ನಡೆದಿಲ್ಲ ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು. ಆಸ್ಪತ್ರೆ ಅಧಿಕಾರಿಗಳನ್ನು ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಸೈಬರ್ ಕ್ರೈಂ ಪೊಲೀಸರ ಸಹಾಯದಿಂದ ಆರೋಪಿಗಳ ಗುರುತು ಪತ್ತೆಹಚ್ಚಿದ ಉಪ ಲೋಕಾಯುಕ್ತರು, ಇಬ್ಬರ ವಿರುದ್ಧವೂ ಪ್ರತ್ಯೇಕ ದೂರು ದಾಖಲಿಸಿ ನೋಟಿಸ್ ಜಾರಿಗೊಳಿಸಿದ್ದಾರೆ. ವೈದ್ಯರಾಗಿರುವ ಆರೋಪಿಗಳು ಜವಾಬ್ದಾರಿಯಿಲ್ಲದೆ ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ತರುವಂತೆ ಕಾಮೆಂಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕೃತ್ಯವು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 17 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 132 ಮತ್ತು 353(2) ಅಡಿ ಅಪರಾಧ. ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದರೆ ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.


