ಮದುವೆಯಾಗಿ ಒಂದು ತಿಂಗಳಷ್ಟೇ ಆಗಿದ್ದ ಬಳ್ಳಾರಿಯ ನವಜೋಡಿಯೊಂದು ದೊಡ್ಡಬಳ್ಳಾಪುರದ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಬಳ್ಳಾರಿ ತಾಲೂಕಿನ ಜೋಳದ ರಾಶಿ ಗ್ರಾಮದ ರಕ್ಷಿತಾ (24) ಮತ್ತು ಬೆಂಗಳೂರಿನ ಪವನ್ (29) ಕಳೆದ ತಿಂಗಳು ಮದುವೆಯಾಗಿದ್ದರು. ಮದುವೆಯ ನಂತರ ಮೊದಲ ಜಾತ್ರೆಗಾಗಿ ಊರಿಗೆ ಬರಲು ದಂಪತಿ ನಿರ್ಧರಿಸಿ ಬೆಂಗಳೂರಿನಿಂದ ಬಳ್ಳಾರಿಗೆ ಕಾರಿನಲ್ಲಿ ಪ್ರಯಾಣಿಸುವಾಗ ದೊಡ್ಡಬಳ್ಳಾಪುರ ಬಳಿ ನಡೆದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಟ್ರೆಕ್ಕಿಂಗ್ಗೆ ತೆರಳಿದ್ದ ಯುವತಿ ನಾಪತ್ತೆ
ಕೊಡಗಿನ ಮಡಿಕೇರಿಯ ಕಕ್ಕಬ್ಬೆ ಗ್ರಾಮದಲ್ಲಿ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳದ ಯುವತಿ ನಾಪತ್ತೆಯಾಗಿದ್ದಾಳೆ. ಶರಣ್ಯ ಜಿ.ಎಸ್. ನಾಪತ್ತೆಯಾಗಿದ್ದು, ಖಾಸಗಿ ಹೋಂಸ್ಟೇನಲ್ಲಿ ತಂಗಿದ್ದ ಆಕೆ ಒಬ್ಬಳೇ ಚಾರಣಕ್ಕೆ ತೆರಳಲು ಮುಂದಾಗಿದ್ದಳು. ಆ ಪ್ರದೇಶದಲ್ಲಿ ಕಾಡಾನೆಗಳ ಕಾಟ ಇರುವ ಕಾರಣ ಬೇರೆಯವರ ಜತೆ ಸಿಬ್ಬಂದಿ ಕಳುಹಿಸಿದ್ದರು. ಸಂಜೆಯಾದರೂ ಶರಣ್ಯ ವಾಪಸಾಗದ ಹಿನ್ನೆಲೆ ಶರಣ್ಯಗಾಗಿ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ನಾಪತ್ತೆಯಾದ ಯುವತಿ ಪತ್ತೆಗಾಗಿ ಅರಣ್ಯ ಇಲಾಖೆಯ 50ಕ್ಕೂ ಅಧಿಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೊಲೀಸರೂ ಸಾಥ್ ನೀಡಿದ್ದಾರೆ, ಯುವತಿಯ ಸುಳಿವು ಸಿಕ್ಕಿಲ್ಲ. ತಾನು ದಾರಿ ತಪ್ಪಿರುವುದಾಗಿ ಹೋಂಸ್ಟೇ ಮಾಲೀಕನಿಗೆ ಕರೆ ಮಾಡಿ ಶರಣ್ಯಾ ಹೇಳಿದ್ದಳು. ಅದಾದ ಬಳಿಕ ಆಕೆಯ ಮೊಬೈಲ್ ನಾಟ್ ರೀಚಬಲ್ ಆಗಿದೆ. ಕೇರಳದಿಂದ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದ ಯುವತಿ ಇತರ 9 ಜನರ ಜೊತೆ ಚಾರಣಕ್ಕೆ ತೆರಳಿದ್ದಳು. ಕೊನೆಯಲ್ಲಿ ನಾಯಿಗಳ ಜೊತೆ ಆಟವಾಡುತ್ತಾ ಹಿಂದುಳಿದ ಶರಣ್ಯ ಉಳಿದವರ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ನಾಪತ್ತೆಯಾದ ಶರಣ್ಯಾ ಸುರಕ್ಷಿತವಾಗಿ ಹಿಂದಿರುಗಲಿ ಎಂದು ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗ ಮಲೆ ತಮ್ಮಚ್ಚ ದೇವರಿಗೆ ಹರಕೆ ಹೊತ್ತಿದೆ.


