Menu

ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ: ಗದಗ ಯುವಕನ ಕೊಲೆಗೈದ ಆರೋಪಿಗಳು ಅರೆಸ್ಟ್‌

ಗದಗದ ಚಂದ್ರು ಕುರಿ ಎಂಬ ಯುವಕನ ಮೃತದೇಹ ಪತ್ತೆ ಪ್ರಕರಣದ ತನಿಕೆ ನಡೆಸಿರುವ ಪೊಲೀಸರು ಇದೊಂದು ಕೊಲೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ವಿವಾಹಿತ ಮಹಿಳೆ ಜೊತೆಗಿನ ಅನೈತಿಕ ಸಂಬಂಧವೇ ಆತನ ಕೊಲೆಗೆ ಕಾರಣ ಎಂಬ ವಿಚಾರವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಕೊಲೆ ಆರೋಪಿಗಳಾದ ಯುವಕನ ಪ್ರೇಯಸಿ ರತ್ನಾ, ಆಕೆಯ ಪತಿ ಈರಪ್ಪ ಮತ್ತು ಸಹೋದರ ಮಹಾಂತೇಶ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ರತ್ನಾಳ ಪತಿ ಮತ್ತು ಸಹೋದರ ಸೇರಿ ಚಂದ್ರುನನ್ನು ಬ್ರಿಡ್ಜ್ ಕೆಳಗೆ ಕರೆದೊಯ್ದು ಕೊಲೆ ಮಾಡಿ ಸುಟ್ಟು ಹಾಕಿದ್ದರು.

ಹುಯಿಲಗೋಳ ಗ್ರಾಮದ ಚಂದ್ರು ಕುರಿ ಮತ್ತು ಅದೇ ಗ್ರಾಮದ ರತ್ನಾ ಕುದರಿ ನಡುವೆ ಅನೈತಿಕ ಸಂಬಂಧವಿತ್ತು. ರತ್ನಾಳಿಗೆ ಶಿರಹಟ್ಟಿ ತಾಲೂಕಿನ ಹೊಳಲಾಪುರ ಗ್ರಾಮದ ಈರಪ್ಪ ಎಂಬಾತನೊಂದಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ರತ್ನಾ ಆಗಾಗ ತವರು ಮನೆಗೆ ಬಂದು ಚಂದ್ರು ಜೊತೆಗಿನ ಸಂಬಂಧ ಮುಂದುವರಿಸಿದ್ದಳು. ವಿಷಯ ರತ್ನಾಳ ಪತಿ ಈರಪ್ಪ ಹಾಗೂ ಸಹೋದರ ಮಹಾಂತೇಶನಿಗೆ ತಿಳಿದು ಹಲವು ಬಾರಿ ಬುದ್ಧಿವಾದ ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ.

ಚಂದ್ರು ಕುರಿಯನ್ನು ಮುಗಿಸಲು ಪ್ಲಾನ್ ಮಾಡಿದ ಪತಿ ಈರಪ್ಪ ಮತ್ತು ಸಹೋದರ ಮಹಾಂತೇಶ, ಮಾರ್ಚ್ 25ರ ರಾತ್ರಿ ರತ್ನಾಳ ಕೈಯಿಂದಲೇ ಚಂದ್ರುಗೆ ಫೋನ್ ಮಾಡಿಸಿ ಮನೆಗೆ ಕರೆಸಿಕೊಂಡಿದ್ದಾರೆ. ಚಂದ್ರು ಬಂದಾಗ ಮನೆಯ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ಈರಪ್ಪ ಮತ್ತು ಮಹಾಂತೇಶ ಆತನ ಮೇಲೆರಗಿದ್ದಾರೆ. ‘ನಿನ್ನ ಜೊತೆ ಮಾತನಾಡೋದಿದೆ ಬಾ’ ಎಂದು ನಿರ್ಜನ ಪ್ರದೇಶದ ಬ್ರಿಡ್ಜ್ ಬಳಿ ಕರೆದೊಯ್ದು ಮಾರಕಾಸ್ತ್ರಗಳಿಂದ ಕತ್ತು ಸೀಳಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿ ಪರಾರಿಯಾಗಿದ್ದರು.

ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾದಾಗ ಗದಗ ಎಸ್ಪಿ ರೋಹನ್ ಜಗದೀಶ್ ನೇತೃತ್ವದ ತಂಡ ತನಿಖೆ ನಡೆಸಿದೆ, ಚಂದ್ರು ಹೊಂದಿದ್ದ ಮಹಿಳೆಯರ ಸಂಪರ್ಕದ ಜಾಡನ್ನು ಹಿಡಿದು ತನಿಖೆ ನಡೆಸಿದಾಗ ರತ್ನಾ ಹಾಗೂ ಆಕೆಯ ಕುಟುಂಬದ ಕೈವಾಡವಿರುವುದು ಪತ್ತೆಯಾಗಿದೆ. ಧಾರವಾಡದ ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *