Menu

ಸೈಬರ್ ವಂಚಕಿಯ ಪ್ರೀತಿ, ಮದುವೆ ಮಾತು ನಂಬಿ ಟೆಕ್ಕಿ ಕಳೆದುಕೊಂಡಿದ್ದು 18 ಲಕ್ಷ ರೂ.

Cyber fraud

ಪ್ರೀತಿಸುವುದಾಗಿ ನಂಬಿಸಿ ಮದುವೆಯಾಗುವ ಆಸೆ ಹುಟ್ಟಿಸಿದ ಸೈಬರ್ ವಂಚಕಿ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ 18 ಲಕ್ಷ ರೂಪಾಯಿ ವಂಚಿಸಿದ್ದಾಳೆ. ನಗರದ ನ್ಯೂ ತಿಪ್ಪಸಂದ್ರದಲ್ಲಿ ನೆಲೆಸಿರುವ 29 ವರ್ಷದ ಟೆಕ್ಕಿ ಪ್ರೀತಿಯ ಹೆಸರಲ್ಲಿ ಹಣ ಕಳೆದುಕೊಂಡ ಬಳಿಕ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಸಂತ್ರಸ್ತ ಡೇಟಿಂಗ್ ಅಪ್ಲಿಕೇಶನ್ ಬಳಸುತ್ತಿದ್ದ. ಮುಂಬೈ ಮೂಲದ ‘ಅಂಜಲಿ ಕುಶ್ಲಾನಿ’ ಎಂದು ಅಲ್ಲಿ ಪರಿಚಯಿಸಿಕೊಂಡ ಯುವತಿ, ಸ್ನೇಹ ಬೆಳೆಸಿದಳು. ಕೆಲವೇ ದಿನಗಳಲ್ಲಿ ಆಕೆ ವಾಟ್ಸಾಪ್ ಮೂಲಕ ಮಾತುಕತೆ ಮುಂದುವರಿಸಿದಳು. ಮಾತುಕತೆ ಬೆಳೆದಂತೆ ಆಕೆ ತಾನು ಎಂಜಿನಿಯರ್ ಜೊತೆ ಮದುವೆಯಾಗಲು ಆಸಕ್ತಿ ಇದೆ ಎಂದು ತಿಳಿಸಿದಳು. ‘ನಮ್ಮ ಭವಿಷ್ಯಕ್ಕಾಗಿ ಹಣ ಗಳಿಸಬೇಕು’ ಎಂಬ ಕಾರಣ ನೀಡಿ, ಆನ್ಲೈನ್ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸಿದಳು.

ಮೊದಲು ಸಣ್ಣ ಮೊತ್ತ ಹೂಡಿಕೆ ಮಾಡಿಸಿ ಅದಕ್ಕೆ ಲಾಭ ತೋರಿಸಿ ಆತನಲ್ಲಿ ವಿಶ್ವಾಸ ಹುಟ್ಟಿಸಿದ್ದಳು. ನಂತರ ಆತನನ್ನು ದೊಡ್ಡ ಮೊತ್ತದ ಹೂಡಿಕೆಗೆ ಪ್ರೇರೇಪಿಸಿದಳು. ಸ್ಟಾಕ್‌ಗಳಲ್ಲಿ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚು ಲಾಭ ಬರುತ್ತದೆ ಎಂದು ಹೇಳಿ ಬ್ಯಾಂಕ್ ಖಾತೆಯಿಂದ 18 ಲಕ್ಷ ರೂಪಾಯಿ ತಾನು ಹೇಳಿದ ಖಾತೆಗಳಿಗೆ ವರ್ಗಾಯಿಸುವಂತೆ ಮಾಡಿದಳು. ಆಕೆ ನಿರ್ದಿಷ್ಟ ನಕಲಿ ಟ್ರೇಡಿಂಗ್ ವೆಬ್ಸೈಟ್ ತೋರಿಸಿ ಹಣ ಹಾಕಿದರೆ ದುಪ್ಪಟ್ಟಾಗುತ್ತದೆ ಎಂಬ ಭರವಸೆ ನೀಡಿದ್ದಳು.

ಕೆಲವು ದಿನಗಳ ಬಳಿಕ ಟೆಕ್ಕಿ ತಾನು ಹಾಕಿದ ಹಣವನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದಾಗ ಯಾವುದೇ ಮೊತ್ತ ಸಿಗಲಿಲ್ಲ. ಅನುಮಾನಗೊಂಡು ಆತ ಆಕೆಯನ್ನು ಪ್ರಶ್ನಿಸಿದಾಗ ತಕ್ಷಣ ಮೊಬೈಲ್ ಸಂಖ್ಯೆ ಮತ್ತು ವಾಟ್ಸಾಪ್ ಖಾತೆ ಬ್ಲಾಕ್ ಮಾಡಿದಳು. ಮೋಸವಾಗಿರುವುದು ಗೊತ್ತಾಗಿ ಆತ ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಮಹಿಳೆಯಾದ ‘ಅಂಜಲಿ ಕುಶ್ಲಾನಿ’ಗಾಗಿ ಶೋಧ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *