ಮೈಸೂರು ನಗರ ಪಾಲಿಕೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಪರಿಸರ ಸ್ನೇಹಿ ಚೀಲಗಳ ಖರೀದಿಯಲ್ಲಿ ನಡೆದ ಅಕ್ರಮಗಳ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
2021ರಲ್ಲಿ ರೋಹಿಣಿ ಸಿಂಧೂರಿ ಮೈಸೂರು ಉಪ ಆಯುಕ್ತರಾಗಿದ್ದ ವೇಳೆ ಈ ಅಕ್ರಮ ನಡೆದಿವೆ ಎಂದು ಆರೋಪಿಸಲಾಗಿದೆ. ರೋಹಿಣಿ ಸಿಂಧೂರಿ ಮಾರುಕಟ್ಟೆಯಲ್ಲಿ 13 ರೂಪಾಯಿ ದರ ಇರುವ ಚೀಲಗಳನ್ನು ಕರ್ನಾಟಕ ಹ್ಯಾಂಡ್ಲೂಮ್ ಡೆವಲಪ್ಮೆಂಟ್ ಕಾರ್ಪೋರೇಶನ್ ಮೂಲಕ ಪ್ರತಿ ಚೀಲಕ್ಕೆ 52 ರೂಪಾಯಿ ದರದಲ್ಲಿ ಖರೀದಿಸಲು ಅನುಮೋದನೆ ನೀಡಿದ್ದು, ಸರ್ಕಾರಕ್ಕೆ 5.88 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇಲಾಖಾ ತನಿಖೆಯಲ್ಲಿ ರೋಹಿಣಿ ಸಿಂಧೂರಿಯನ್ನು ನಿರ್ದೋಷಿ ಎಂದು ಘೋಷಿಸಿದ್ದರೂ ಕ್ರಿಮಿನಲ್ ತನಿಖೆ ಪ್ರಾರಂಭಿಸಲು ತಡೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡಲು ಅಧೀನ ಕಾರ್ಯದರ್ಶಿ, ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಭ್ರಷ್ಟಾಚಾರದ ಆರೋಪವಿದ್ದಾಗ ತನಿಖೆ ನಡೆಯದೇ ಸತ್ಯ ಬಹಿರಂಗವಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ಅಡಿ ನಾಲ್ಕು ವಾರಗಳೊಳಗೆ ಅನುಮತಿ ನೀಡಿ, ರೋಹಿಣಿ ಸಿಂಧೂರಿ ಹಾಗೂ ಆಗಿನ ಕರ್ನಾಟಕ ಹ್ಯಾಂಡ್ಲೂಮ್ ಡೆವಲಪ್ಮೆಂಟ್ ಕಾರ್ಪೋರೇಶನ್ನ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಲು ಎಫ್ಐಆರ್ ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ಕಲ್ಯಾಣ ಯೋಜನೆಗಳಿಗೆ ಮೀಸಲಾಗಿದ್ದ ಹಣವನ್ನು ಚೀಲ ಖರೀದಿಗೆ ಬಳಸಲಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಭ್ರಷ್ಟಾಚಾರದ ಅಂಶಗಳನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ನಾಗಪ್ರಸನ್ನ ಮಾರ್ಚ್ 27ರಂದು ಈ ಆದೇಶ ಹೊರಡಿಸಿದ್ದು, ಮೈಸೂರು ಮೂಲದ ವಕೀಲ ರವಿಚಂದ್ರೇಗೌಡ ಎನ್.ಆರ್ ಸಲ್ಲಿಸಿದ ಅರ್ಜಿಯನ್ನು ಅನುಮೋದಿಸಿದ್ದಾರೆ. ಅರ್ಜಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೆಕ್ಷನ್ 17A ಅಡಿ ಅನುಮತಿ ನಿರಾಕರಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಮನವಿ ಮಾಡಲಾಗಿತ್ತು.
ಅರ್ಜಿದಾರರ ಪ್ರಕಾರ, 5 ಕೆಜಿ ಮತ್ತು 10 ಕೆಜಿ ಸಾಮರ್ಥ್ಯದ ಒಟ್ಟು 14,71,458 ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಪ್ರತಿ ಚೀಲಕ್ಕೆ 52 ರೂಪಾಯಿ (ಜಿಎಸ್ಟಿ ಸೇರಿ) ದರದಲ್ಲಿ 7.65 ಕೋಟಿ ವೆಚ್ಚದಲ್ಲಿ ಖರೀದಿಸಲು ಆದೇಶ ನೀಡಲಾಗಿದ್ದು, ಇದರಿಂದ ಸರ್ಕಾರಕ್ಕೆ 5.88 ಕೋಟಿ ರೂಪಾಯಿ ನಷ್ಟವಾಗಿದೆ.
ಅರ್ಜಿದಾರರು 2021ರ ಡಿಸೆಂಬರ್ 17ರಂದು ದೂರು ಸಲ್ಲಿಸಿದ್ದು, ಸೆಕ್ಷನ್ 17A ಅಡಿ ಅನುಮತಿ ಕೇಳಲಾಗಿತ್ತು. ಇದನ್ನು 2022ರ ಸೆಪ್ಟೆಂಬರ್ 19ರಂದು ತಿರಸ್ಕರಿಸಲಾಗಿತ್ತು. ನಂತರ 2025ರಲ್ಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, 2025ರ ಫೆಬ್ರವರಿ 20ರಂದು ಸಹಪೀಠ ಅದನ್ನು ರದ್ದುಪಡಿಸಿ ಮರುಪರಿಶೀಲಿಸಲು ಸರ್ಕಾರಕ್ಕೆ ಕಳುಹಿಸಿತ್ತು. ಕಳೆದ ವರ್ಷ ಮೇ 26ರಂದು ಮತ್ತೆ ಅನುಮತಿಯನ್ನು ತಿರಸ್ಕರಿಸಿದ್ದು, ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿತ್ತು.


