Menu

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಒಂದು ಸಾವು: ಸುನಾಮಿ ಭೀತಿ

ಇಂಡೋನೇಷ್ಯಾದಲ್ಲಿ ಗುರುವಾರ ಮುಂಜಾನೆ ಭೂಕಂಪ ಸಂಭವಿಸಿದ್ದು,  ಒಬ್ಬ ವ್ಯಕ್ತಿ ಬಲಿಯಾಗಿರುವುದು ದೃಢಪಟ್ಟಿದೆ.  ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆಯು 7.8 ದಾಖಲಾಗಿದೆ. ಆಗ್ನೇಯ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಸುನಾಮಿ ಅಪ್ಪಳಿಸುವ ಭೀತಿ ಎದುರಾಗಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ವರದಿ ಪ್ರಕಾರ, ಸ್ಥಳೀಯ ಕಾಲಮಾನ ಮುಂಜಾನೆ 4:18ಕ್ಕೆ ಭೂಮಿ ಪ್ರಬಲವಾಗಿ ಕಂಪಿಸಿದೆ. ಟೆರ್ನೇಟ್‌ನಿಂದ ಪಶ್ಚಿಮ-ವಾಯುವ್ಯಕ್ಕೆ 119 ಕಿಮೀ ದೂರದಲ್ಲಿರುವ ‘ಮಾಜು’ ದ್ವೀಪದ ಬಳಿ ಭೂಕಂಪದ ಕೇಂದ್ರಬಿಂದು ಇದೆ. ಭೂಮಿಯ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ.

ಕಡಿಮೆ ಆಳದಲ್ಲಿ ಸಂಭವಿಸುವ ಭೂಕಂಪಗಳು ಮೇಲ್ಮೈನಲ್ಲಿ ಅತಿ ಹೆಚ್ಚು ಹಾನಿ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಭೂಕಂಪದ ಕೇಂದ್ರಬಿಂದುವಿನಿಂದ 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಮಲೇಷ್ಯಾದ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಲೆಗಳು ಅಪ್ಪಳಿಸುವ ಅಪಾಯವಿದೆ. ಕರಾವಳಿ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಉತ್ತರ ಸುಲಾವೇಸಿ ಪ್ರಾಂತ್ಯದ ಮನಡೋ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಭೂಕಂಪನ ತೀವ್ರವಾಗಿತ್ತು, ಗಾಢ ನಿದ್ರೆಯಲ್ಲಿದ್ದ ಜನರು ಮನೆಗಳು ನಡುಗುತ್ತಿದ್ದಂತೆ ರಸ್ತೆಗಳಿಗೆ ಓಡಿದ್ದಾರೆ. ನಿದ್ರೆಯಲ್ಲಿದ್ದಾಗ ಮಂಚ ಜೋರಾಗಿ ಅಲುಗಾಡಲು ಶುರುವಾಯಿತು, ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎಲ್ಲರೂ ಕಿರುಚುತ್ತಾ ಹೊರಗೆ ಓಡುತ್ತಿದ್ದೆವು ಎಂದು ನಾಗರಿಕರು ಹೇಳಿಕೊಂಡಿದ್ದಾರೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ನಿವಾಸಿಗಳು ಮೈದಾನಗಳಲ್ಲಿ ಆಶ್ರಯ ಪಡೆದಿದ್ದಾರೆ. ರಕ್ಷಣಾ ಪಡೆಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಹೈ ಅಲರ್ಟ್‌ನಲ್ಲಿವೆ.

Related Posts

Leave a Reply

Your email address will not be published. Required fields are marked *